ದಸರಾ ಗಜಪಡೆಗೆ ಭಾರ ಹೊರುವ ತಾಲೀಮು, ಇಂದು ಅರ್ಜುನ ಹೊತ್ತ ಭಾರ ಎಷ್ಟು ಗೊತ್ತಾ?

ಮೈಸೂರು, ಸೆ.6- ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಗಜಪಡೆಗೆ ಇಂದು ಎರಡನೇ ಹಂತದ ಭಾರ ಹೊರುವ ತಾಲೀಮನ್ನು ಆರಂಭಿಸಲಾಯಿತು. ಚಿನ್ನದ ಅಂಬಾರಿ ಹೊರುವ ಆನೆ ಅರ್ಜುನನಿಗೆ 350ಕೆಜಿ ತೂಕದ ಮರಳು ಮೂಟೆಯನ್ನು ಬೆನ್ನ ಮೇಲೆ ಕಟ್ಟಿ ತಾಲೀಮು ನಡೆಸಲಾಯಿತು. 350ಕೆಜಿ ತೂಕದ ಮರಳು ಮೂಟೆ ಹೊತ್ತ ಅರ್ಜುನ ಅರಮನೆಯಿಂದ ಬನ್ನಿಮಂಟಪದವರೆಗೂ ಸಾಗಿ ಬಂದನು.  ಅರ್ಜುನನೊಂದಿಗೆ ಹೆಣ್ಣಾನೆಗಳಾದ (ಕುಂಕಿ) ವಿಜಯ ಮತ್ತು ವರಲಕ್ಷ್ಮಿ ಸಹ ಸಾಗಿಬಂದರು.

ಅರ್ಜುನ 350ಕೆಜಿ ತೂಕದ ಮರಳು ಮೂಟೆ ಹೊತ್ತು ರಾಜಗಾಂಭೀರ್ಯದಲ್ಲಿ ಮುನ್ನಡೆದರೇ ಆತನ ಹಿಂದೆ ಧನಂಜಯ, ಈಶ್ವರ, ಅಭಿಮನ್ಯು ಸಹ ಹೆಜ್ಜೆ ಹಾಕಿದರು. ಅರ್ಜುನ ವಿಜಯದಶಮಿ ದಿನ 750ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಹೀಗಾಗಿ ಆತನಿಗೆ ಇಂದಿನಿಂದ ಮರಳು ಮೂಟೆ ಹೊರುವ ತಾಲೀಮನ್ನು ಆರಂಭಿಸಲಾಗಿದೆ.
ಮೊದಲು 350ಕೆಜಿ, ಆನಂತರ ಹಂತ ಹಂತವಾಗಿ ಭಾರ ಹೆಚ್ಚಿಸಿ 800ಕೆಜಿ ತೂಕ ಹೊರುವ ತಾಲೀಮು ನಡೆಸಲಾಗುತ್ತದೆ.

ನ್ಯಾಯಾಲಯದ ಆದೇಶದಂತೆ 60ವರ್ಷ ತುಂಬಿದ ಆನೆಗೆ ಹೊರಿಸುವಂತಿಲ್ಲ, ಹಾಗಾಗಿ ಮುಂದಿನ ವರ್ಷದಿಂದ ಅರ್ಜುನನ ಬದಲು ಬೇರೆ ಆನೆಗೆ ಅಂಬಾರಿ ಹೊರಲು ಸಿದ್ದಗೊಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಭಿಮನ್ಯು ಆನೆಗೆ ಅಂಬಾರಿ ಹೊರಲು ತಾಲೀಮು ನಡೆಸಲಾಗುವುದು ಎಂದು ತಿಳಿದು ಬಂದಿದೆ.  ಎರಡನೇ ಸಾಲಿನ ಆನೆಗಳಾದ ಜಯಪ್ರಕಾಶ, ಗೋಪಿ, ಧನಂಜಯಗೆ ಭಾರ ಹೊರುವ ತಾಲೀಮು ನಡೆಸಲಾಗುವುದು ಎಂದು ಡಿಸಿಎಫ್ ಅಲೆಗ್ಸ್ಯಾಂಡರ್ ತಿಳಿಸಿದ್ದಾರೆ.