ಮೈಸೂರು ದಸರಾಗೆ ಸಿದ್ಧತೆಗಳು ಪೂರ್ಣ: ಸಚಿವ ಸೋಮಶೇಖರ್

Social Share

ಮೈಸೂರು, ಸೆ.18- ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ನಾಳೆಯೊಳಗೆ ಅಂತಿಮವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಅರಮನೆ ಆವರಣದಲ್ಲಿಂದು ಮಾವುತರು, ಕಾವಾಡಿಗರ ಕುಟುಂಬವರ್ಗದವರಿಗೆ ಹಮ್ಮಿಕೊಂಡಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಳೆ ಅಧಿಕೃತವಾಗಿ ರಾಷ್ಟ್ರಪತಿ ಕಚೇರಿಯಿಂದ ಪೂರ್ಣ ಪ್ರಮಾಣದ ಮಾಹಿತಿ ಬರಲಿದ್ದು, ನಂತರ ಭದ್ರತೆ ಸೇರಿದಂತೆ ವಿವಿಧ ವ್ಯವಸ್ಥೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನಂತರ ಆಹ್ವಾನ ಪತ್ರಿಕೆ ಸಿದ್ಧಪಡಿಸಿ ವಿವಿಧ ಕಾರ್ಯಕ್ರಮಗಳು ಹಾಗೂ ಅತಿಥಿಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಮೈಸೂರಿನ ಶಾಲಾ-ಕಾಲೇಜುಗಳಿಗೆ 26ರಿಂದಲೇ ರಜೆ ಘೋಷಿಸಲಾಗುವುದು. ದಸರಾ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ವಾಹನಗಳಿಗೆ ತೆರಿಗೆ ರದ್ದುಪಡಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ದಸರಾದಲ್ಲಿ ಪಾಲ್ಗೊಳ್ಳಲು ಬಂದಿದ್ದ ಲಕ್ಷ್ಮೀ ಗಂಡು ಮರಿಗೆ ಜನ್ಮ ನೀಡಿದ್ದು, ಶ್ರೀ ದತ್ತಾತ್ರೇಯ ಎಂದು ನಾಮಕರಣ ಮಾಡಲಾಗಿದೆ. ಇದು ನಮಗೆ ಸಂತಸದ ವಿಷಯವಾಗಿದೆ. ಕೆಲ ದಿನಗಳ ಕಾಲ ಆನೆ ಮತ್ತು ಆನೆ ಮರಿಯನ್ನು ಇಲ್ಲೇ ಲಾಲನೆ-ಪಾಲನೆ ಮಾಡಿ ನಂತರ ಅರಣ್ಯಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು. ಕಾರ್ಯಕ್ರಮದ ವೇದಿಕೆ, ಆಸನದ ವ್ಯವಸ್ಥೆ, ಭದ್ರತೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸ್ಥಳದ ಲಭ್ಯತೆಗನುಗುಣವಾಗಿ 1500 ರಿಂದ 2000 ಜನ ಸೇರುವಷ್ಟು ಅವಕಾಶವಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶವಿದೆ ಎಂದರು. ದೇವಸ್ಥಾನದ ಪಾರ್ಕಿಂಗ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಗಡಿ-ಮಳಿಗೆಗಳು, ಫುಡ್‍ಕೋರ್ಟ್‍ಗೆ ಭೇಟಿ ನೀಡಿ ಪರಿಶೀಲಿಸಿದರು.

Articles You Might Like

Share This Article