ಟ್ರ್ಯಾಕ್ಟರ್ ರ‍್ಯಾಲಿಗೆ ಮೈಸೂರಿನಿಂದ 5 ಸಾವಿರ ರೈತರು..!

ಮೈಸೂರು, ಜ.25- ಬೆಂಗಳೂರಿನಲ್ಲಿ ನಾಳೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ನಾಳೆಯ ಪ್ರತಿಭಟನೆಗಾಗಿ ಮೈಸೂರಿನಿಂದ ಟ್ರ್ಯಾಕ್ಟರ್, ಜೀಪು, ಬೈಕ್ ಹಾಗೂ ಎತ್ತಿನಗಾಡಿಗಳ ಮೂಲಕ ಸುಮಾರು 5 ಸಾವಿರಕ್ಕೂ ಹೆಚ್ಚು ರೈತರು ಬೆಂಗಳೂರಿಗೆ ತೆರಳುತ್ತೇವೆ ಎಂದು ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು.

ಇಂದು ನಾಲ್ಕು ಗಂಟೆಗೆ ಮೈಸೂರಿನಿಂದ ವಿವಿಧ ತಾಲ್ಲೂಕುಗಳ ರೈತರು ರ‍್ಯಾಲಿ ಪ್ರಾರಂಭಿಸಿ ರಾತ್ರಿ ವೇಳೆಗೆ ಚನ್ನಪಟ್ಟಣ ತಲುಪುತ್ತೇವೆ. ಅಲ್ಲಿ ವಾಸ್ತವ್ಯ ಹೂಡಿ ನಾಳೆ ಬೆಳಗ್ಗೆಯೇ ಬೆಂಗಳೂರಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದರು.