ಮೈಸೂರಿನಲ್ಲಿ ಸುರಿದ ಭಾರೀ ಮಳೆಗೆ ಮೋರಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ..!

ಮೈಸೂರು,ಅ.25- ಮೈಸೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಸಿದ್ದಾರ್ಥನಗರದ ದೊಡ್ಡ ಮೋರಿಯೊಂದರಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಸಿದ್ದಾರ್ಥನಗರ ವಿನಯಮಾರ್ಗ 2ನೇ ಕ್ರಾಸ್ ನಿವಾಸಿ ಎಂ.ಜೆ. ಚಂದ್ರೇಗೌಡ(60) ಮೋರಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ.

ನಿನ್ನೆ ಸಂಜೆ 6ಗಂಟೆಯ ಸುಮಾರಿಗೆ ಆರಂಭವಾದ ಧಾರಾಕಾರ ಮಳೆ ಇಂದು ಬೆಳಿಗ್ಗೆಯವರೆಗೂ ಹನಿಹನಿಯಾಗಿ ಸುರಿಯುತ್ತಲೇ ಇತ್ತು. ಈ ಧಾರಾಕಾರ ಮಳೆಗೆ ಮೈಸೂರು ನಗರದ ಮೋರಿಗಳಲ್ಲಿ ನೀರು ತುಂಬಿ ನದಿಯಂತೆ ಹರಿಯಲಾರಂಭಿಸಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಸಿದ್ದಾರ್ಥ ನಗರದ ವಿನಯಮಾರ್ಗ 2ನೇ ಕ್ರಾಸ್ ಮನೆ ಸಂಖ್ಯೆ 1109ರ ಕಾಂಪೌಂಡ್ ಒಳಗೂ ನೀರು ನುಗ್ಗಿತ್ತು.

ಮನೆಮಂದಿ ನೀರನ್ನು ಹೊರಹಾಕುವ ಪ್ರಯತ್ನದಲ್ಲಿದ್ದರು. ಮನೆ ಮುಂದಿರುವ ಸಣ್ಣ ಸೇತುವೆ ಬಳಿ ನಿಂತು ದೊಡ್ಡ ಮೋರಿಯಲ್ಲಿ ತುಂಬಿ ಹರಿಯುತ್ತಿದ್ದ ನೀರನ್ನು ನೋಡುತ್ತಿದ್ದ ಚಂದ್ರೇಗೌಡ ಎಂಬವರು ಕಾಲು ಜಾರಿ ಮೋರಿಗೆ ಬಿದ್ದಿರುವುದನ್ನು ಕುಟುಂಬಸ್ಥರು ನೋಡಿದ್ದಾರೆ.

ಅವರ ಕುಟುಂಬಸ್ಥರು ಕೂಡಲೇ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು, ಮೋರಿಯುದ್ದಕ್ಕೂ ಕಾರಂಜಿಕೆರೆಯವರೆಗೆ ಹುಡುಕಾಟ ನಡೆಸಿದ್ದರು. ಇದುವರೆಗೂ ಸಿಕ್ಕಿಲ್ಲ ಇಂದು ಬೆಳಗಿನಿಂದಲೇ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

ಮಳೆಯ ಅಬ್ಬರಕ್ಕೆ ಮೈಸೂರು ನಗರದ ವಿವಿಧ ಬಡಾವಣೆಗಳು ಜಲಾವೃತವಾಗಿತ್ತು. ಸಾತಗಳ್ಳಿ, ಅಜೀಜ್‍ಸೇಠ್ ನಗರ, ಮಧುವನ, ಜನತಾನಗರ, ದಟ್ಟಗಳ್ಳಿ, ಗುಂಡೂರಾವ್ ನಗರ, ಬನ್ನಿಮಂಟಪ ಹುಕ್ಕೋ, ಗಿರಿದರ್ಶಿನಿ ಬಡಾವಣೆ, ಆಲನಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.
ರಿಂಗ್ ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ದೇವೇಗೌಡ ಸರ್ಕಲ್ ನಡುವಿನ ಜಾಗದಲ್ಲಿ ಕಾರುಗಳು ನೀರಿನಲ್ಲಿ ತೇಲಾಡಿದ್ದು, ಅದರೊಳಗಿದ್ದವರು ರಕ್ಷಣೆಗಾಗಿ ಕೂಗುತ್ತಿದ್ದರು ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಬನ್ನಿಮಂಟಪ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರಿನಲ್ಲಿದ್ದ ಕುಟುಂಬದವರನ್ನು ರಕ್ಷಿಸಿದ್ದಾರೆ. ಅಲ್ಲದೆ ನೀರಿನಲ್ಲಿ ತೇಲಾಡುತ್ತಿದ್ದ ಹಲವು ಕಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಆಲನಹಳ್ಳಿ ಬಡಾವಣೆಯ ತಗ್ಗು ಪ್ರದೇಶವೊಂದರಲ್ಲಿ ಕೆಲ ಕಾರುಗಳು ನೀರಿನಲ್ಲಿ ತೇಲಾಡುತ್ತಿತ್ತು ಎನ್ನಲಾಗಿದೆ.

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮತ್ತು ಗುಡುಗು-ಮಿಂಚಿನ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಇದೇ ವೇಳೆ ಪಾಲಿಕೆ ಸದಸ್ಯರಾದ ನಿರ್ಮಲ ಹರೀಶ್, ಪಾಲಿಕೆ ಅಕಾರಿಗಳು ಮೂಡಾ ಅಕಾರಿಗಳ ಜೊತೆ ಸ್ಥಳ ಪರೀಶಿಲಿಸಿದರು. ಮೈಸೂರಿನಲ್ಲಿ ಸುರಿದ ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಶ್ರೀ ಪಂಚಗವಿ ಮಠ ಕುಸಿದು ಬಿದ್ದಿದೆ. ಇಂದೂ ಬೆಳಗಿನಿಂದಲೂ ಕೂಡ ಮೈಸೂರಲ್ಲಿ ಮೋಡ ಕವಿದ ವಾತಾವರಣವಿತ್ತು.