ಮೈಸೂರು, ಸೆ.27- ನಾಡಹಬ್ಬ ದಸರಾದ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಅಧಿಕಾರಿಗಳು ಯಡವಟ್ಟು ಮಾಡಿರುವುದು ಕಂಡು ಬಂದಿದೆ. ಮೃತ ವ್ಯಕ್ತಿಗೂ ಕವಿಗೋಷ್ಠಿಗೆ ಆಹ್ವಾನ ನೀಡಲಾಗಿದೆ. ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಅ.3ರಂದು ನಡೆಯಲಿರುವ ಪ್ರಧಾನ ಕವಿಗೋಷ್ಠಿಗೆ ಸಂಬಂಧಿಸಿದಂತೆ ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ನಿಧನರಾಗಿದ್ದ ಸಾಹಿತಿ ಹೆಸರು ಮುದ್ರಿಸಲಾಗಿದೆ.
ಆಕಾಶವಾಣಿ ನಿಲಯ ನಿರ್ದೇಶಕರಾಗಿದ್ದ ಜಿ.ಕೆ.ರವೀಂದ್ರ ಕುಮಾರ್ 2019ರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ರವೀಂದ್ರ ಕುಮಾರ್ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿದೆ. ದಸರಾ ಆಯೋಜಕರು ರವೀಂದ್ರ ಕುಮಾರ್ ಹೆಸರು ಮುದ್ರಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಮರು ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಸಮಿತಿಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಚಾಮರಾಜನಗರ ಸಂಸದ ಎಂದು ಮುದ್ರಿಸಲಾಗಿದೆ. ಸೋಮವಾರ ನಡೆಯಲಿರುವ ದಸರಾ ಕವಿಗೋಷ್ಠಿಯಲ್ಲಿ ನಾಡಿನ ಹೆಸರಾಂತ ಕವಿಗಳು ಭಾಗಿಯಾಗಲಿದ್ದಾರೆ. ಈ ಸಮಯದಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ಮೃತ ಕವಿಯ ಹೆಸರು ಸೇರ್ಪಡೆಯಾಗಿರುವುದು ಅಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಎಷ್ಟು ಬೇಜವಬ್ದಾರರಾಗಿದ್ದಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.