ಮೈಸೂರು ಮೇಯರ್ ಪಟ್ಟ : ಸೋಮಶೇಖರ್ ಕಾರ್ಯತಂತ್ರ ಶ್ಲಾಘಿಸಿದ ಸಿಎಂ

ಬೆಂಗಳೂರು, ಆ.25- ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟ ಪಡೆಯುವಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿದ ಶ್ರಮ ನಿಜಕ್ಕೂ ಸಾರ್ಥಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈ ಅಧಿಕಾರದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲಿ ಎಂದು ಅವರು ಹೇಳಿದರು.

ಮೈಸೂರು ಪಟ್ಟ ಬಿಜೆಪಿಗೆ ಒಲಿಯುತ್ತಿದ್ದಂತೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್, ಮೈಸೂರಿನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಪಕ್ಷಕ್ಕಾಗಿ ನಿಮ್ಮ ಸೇವೆ ಮುಂದುವರಿಯಲಿ ಎಂದು ಹೇಳಿದರು. ಕೊನೆಗೂ ಬಹುವರ್ಷಗಳ ಕನಸು ನನಸಾಗಿದೆ. ಇದಕ್ಕೆ ನಮ್ಮ ಸಹಕಾರ ಸಚಿವರ ಕಾರ್ಯತಂತ್ರ ಅಡಗಿದೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಗ್ರಾಪಂ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ಪಾಲಿಕೆಯಲ್ಲಿ ಮೇಯರ್ ಸ್ಥಾನ ಬಿಜೆಪಿಗೆ ಒಲಿದಿರುವುದರ ಹಿಂದೆ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಮಹತ್ತರದ್ದಾಗಿದೆ. ಮೈಸೂರು ಜನತೆ ಮತ್ತು ಪಕ್ಷದ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ತಿಳಿಸಿದ್ದಾರೆ. ಶಾಸಕರಾದ ಎಲ್.ನಾಗೇಂದ್ರ ಸೇರಿದಂತೆ ಹಲವು ಮುಖಂಡರು ಸೋಮಶೇಖರ್ ಅವರ ಕಾರ್ಯತಂತ್ರವನ್ನು ಕೊಂಡಾಡಿದ್ದಾರೆ.