ಬೆಂಗಳೂರು,ಜ.31-ಪಕ್ಷದ ಶಿಸ್ತು ಉಲ್ಲಂಘಿ ಹಾದಿಬೀದಿಯಲ್ಲಿ ರಂಪಾಟ ಮಾಡುವುದು ಇಲ್ಲವೇ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದರೆ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ , ಮೈಸೂರು ಸಂಸದ ಹಾಗೂ ಶಾಸಕರಿಗೆ ಎಚ್ಚರಿಸಿದ್ದಾರೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ ಹಾಗೂ ಎಸ್.ಎ.ರಾಮದಾಸ್ ಅವರಿಗೆ ದೂರವಾಣಿ ಕರೆ ಮಾಡಿರುವ ಕಟೀಲ್ ಅವರು, ತಕ್ಷಣವೇ ನಿಮ್ಮ ವಾಕ್ಸಮರಕ್ಕೆ ಕಡಿವಾಣ ಹಾಕಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಪರಸ್ಪರ ಒಬ್ಬರಿಗೊಬ್ಬರು ಹಾದಿಬೀದಿಯಲ್ಲಿ ಟೀಕೆ ಮಾಡುವುದು, ಆರೋಪ-ಪ್ರತ್ಯಾರೋಪ, ವೈಯಕ್ತಿಕ ನಿಂದನೆ ಯಾರಿಗೂ ಶೋಭೆ ತರುವುದಿಲ್ಲ. ಇದೇ ಪ್ರವೃತ್ತಿ ಮುಂದುವರೆದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ನಾನು ಜಿಲ್ಲಾಧ್ಯಕ್ಷರಿಗೆ ವರದಿ ನೀಡಲು ಸೂಚಿಸಿದ್ದೇನೆ. ಕಳೆದ ಒಂದು ವಾರದಿಂದ ಸಂಸದರು ಮತ್ತು ಶಾಸಕರ ನಡುವೆ ನಡೆದಿರುವ ಗದ್ದಲದ ವಿಷಯವನ್ನು ವರಿಷ್ಠರ ಗಮನಕ್ಕೂ ತರುತ್ತೇನೆ. ಪಕ್ಷದ ಶಿಸ್ತು ಉಲ್ಲಂಘಿಸುವಂತಹ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಶಿಸ್ತು ಉಲ್ಲಂಘಿಸುವ ಪ್ರವೃತ್ತಿಯನ್ನು ಯಾರೂ ತೋರಬಾರದು. ಇದರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ನಮ್ಮ ಪಕ್ಷವೇ ಅಧಿಕಾರದಲ್ಲಿರುವಾಗ ಜನಪ್ರತಿನಿಧಿಗಳಾದ ನೀವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಪಕ್ಷದ ಸಂಘಟನೆ ಹಾಗೂ ಅಭಿವೃದ್ದಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಮುಕ್ತವಾಗಿ ಚರ್ಚೆ ಮಾಡಿ. ಆದರೆ ಮಾಧ್ಯಮದ ಮುಂದೆ ಸಾರ್ವಜನಿಕವಾಗಿ ಚರ್ಚಿಸುವ ಅಗತ್ಯವಿಲ್ಲ. ಇದರಿಂದ ಕಾರ್ಯಕರ್ತರಿಗೆ ಮುಜುಗರವಾಗುತ್ತದೆ. ಹಿರಿಯರಾದ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಕಟೀಲ್ ಅಸಮಾಧಾನ ಹೊರಹಾಕಿದ್ದಾರೆ.
ಯೋಜನೆ ಜನಪರವಾಗಿದ್ದರೆ ಅದಕ್ಕೆ ಯಾರೂ ಕೂಡ ಅಡ್ಡಿಪಡಿಸಬಾರದು. ಜನರಿಗೆ ತೊಂದರೆಯಾಗುವುದಿದ್ದರೆ ಅದನ್ನು ಅನುಷ್ಠಾನ ಮಾಡುವ ಅಗತ್ಯವಿಲ್ಲ. ಪಕ್ಷದ ಕಚೇರಿಗೆ ಬಂದು ಇದರ ಬಗ್ಗೆ ಮೂವರು ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.
ಇತ್ತೀಚೆಗೆ ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ಮಹಾರಾಜರನ್ನ ಬಿಟ್ಟರೆ ಅತಿ ಹೆಚ್ಚು ಮತಗಳಿಂದ ಗೆದ್ದಿದ್ದು ನಾನೇ. ಹೆಚ್ಚು ಲೀಡ್‍ನಲ್ಲಿ ಜನರು ನನ್ನನ್ನು ಮರು ಆಯ್ಕೆ ಮಾಡಿದ್ದಾರೆ. ನನ್ನಿಂದಲೇ ಮೈಸೂರು ಅಭಿವೃದ್ಧಿ ಆಗುತ್ತಿರುವುದು ಎಂದು ಹೇಳುವ ಮೂಲಕ ಶಾಸಕದ್ವಯರ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದ್ದರು.
ಶಾಸಕ ನಾಗೇಂದ್ರ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ ಎಂದಿದ್ದ ಪ್ರತಾಪ್ ಸಿಂಹ, 30 ಕೋಟಿ ರೂ. ಅನುದಾನ ತಂದಿಲ್ಲ. 300 ಕೋಟಿ ರೂಪಾಯಿ ಕೆಲಸ ಅಂತ ಹೇಳುತ್ತಾರೆ. ಎಲ್ಲಿದೆ 300 ಕೋಟಿ? ಯಾವ ರಸ್ತೆ ಮಾಡಿದ್ದೀರಿ ತೋರಿಸಿ ಎಂದು ಸವಾಲು ಹಾಕಿದ್ದರು.
ಚಾಮರಾಜ ಕ್ಷೇತ್ರದ ಕೆ.ಆರ್. ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ. ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು. ಪಾಸ್ ಪೋರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು.
ನೀವು ಗೋವಾಕ್ಕೆ ಹೋಗುವ ಫ್ಲೈಟ್ ತಂದಿದ್ದು ನಾನು. ಬೆಂಗಳೂರು-ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ.ಆರ್. ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು. ಶಾಸಕರು ರಿಯಲ್ ಎಸ್ಟೇಟ್ ಮಾಡಲಿ, ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದರು.
