ಮೈಸೂರು ಫಲಪುಷ್ಪ ಪ್ರದರ್ಶನಕ್ಕೆ ಜಿಎಸ್‍ಟಿ ಬರೆ

ಮೈಸೂರು, ಸೆ.27- ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಜಿಎಸ್‍ಟಿ ಬರೆ ಬಿದ್ದಿದ್ದು ಸಾರ್ವಜನಿಕರಿಗೆ ಹೊರೆಯಾಗಲಿದೆ. ನಗರದ ಕುಪ್ಪಣ್ಣ ಪಾರ್ಕ್‍ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಸೆ.29 ರಿಂದ ಅ.9ರ ವರೆಗೆ ಪ್ರವೇಶವಿರುತ್ತದೆ. ಈ ಬಾರಿ ಪ್ರದರ್ಶನಕ್ಕೆ ಟಿಕೆಟ್ ದರ ಹೆಚ್ಚಿಸುವುದರೊಂದಿಗೆ ಜಿಎಸ್‍ಟಿ ದರವನ್ನು ಕೂಡ ಹಾಕಲಾಗಿದೆ.

ಕಳೆದ ವರ್ಷ ವಯಸ್ಕರಿಗೆ 20ರೂ. ನಿಂದ 25ರೂ.ಗೆ ಟಿಕೆಟ್ ದರ ಹೆಚ್ಚಿಸಿ ಅದರ ಜತೆಗೆ 5ರೂ. ಜಿಎಸ್‍ಟಿ ವಿಧಿಸಿ 30ರೂ. ನಿಗದಿಪಡಿಸಲಾಗಿದೆ. ವಯಸ್ಕರಿಗೆ 30ರೂ., ಮಕ್ಕಳಿಗೆ 15ರೂ. ಟಿಕೆಟ್ ದರ ಇಡಲಾಗಿದೆ. ಫಲಪುಷ್ಪ ಪ್ರದರ್ಶನದ ಆಕರ್ಷಣೆಯಾಗಿ ಶ್ರೀ ಚಾಮರಾಜ ಒಡೆಯರ್ ಅವರ ಮಾದರಿ ಹಾಗೂ ಎರಡು ಆನೆಗಳನ್ನು ವಿವಿಧ ಹೂಗಳಿಂದ ನಿರ್ಮಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್ ತಿಳಿಸಿದರು.

50 ಅಡಿ ಉದ್ದ, 27 ಅಡಿ ಎತ್ತರ ಹಾಗೂ 12 ಅಡಿ ಮಂಟಪದಲ್ಲಿ ಜಯಚಾಮರಾಜ ಒಡೆಯರ್ ಮಾದರಿಯನ್ನು ಅವರ ನೂರನೆ ಜನ್ಮ ಶತಾಬ್ದಿ ಅಂಗವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು. ಮಕ್ಕಳಿಗಾಗಿ ಚಂದ್ರಯಾನ-2, ಡೊನಾಲ್ಡ್ ಡಕ್, ಏರ್‍ಶೋ ಕಾನ್ಸೆಪ್ಟ್‍ಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.  ವಿವಿಧ ಸಂಘ-ಸಂಸ್ಥೇಗಳಿಂದ 25 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಹೂ-ತರಕಾರಿ ಕುಂಡಗಳ ಪ್ರದರ್ಶನ ಆಯೋಜಿಸಲಾಗಿದೆ.

ಜೆ.ಕೆ.ಟೈರ್ಸ್‍ನವರು ಎರಡು ವಿಂಟೇಜ್ ಕಾರುಗಳ ಮಾದರಿ, ಡೈರಿ ಡೇ ಅವರು ಪಿಯಾನೊ ಮಾದರಿ, ಸುದರ್ಶನ್ ಸಿಲ್ಕ್ಸ್‍ನವರು ದುಬೈ ಮಿರಾಕಲ್ ಗಾರ್ಡನ್‍ನಲ್ಲಿರುವ ಫೆÇ್ಲೀರಾಲ್ ಕಾನ್‍ಸ್ಟೆಪ್ಟ್, ಸಿಕೆಸಿ ಜ್ಯುವೆಲ್ಸ್‍ನವರು ಸಿಂಹಾಸನ ಹಾಗೂ ಅಂಬಾರಿ ಆನೆ ಮಾದರಿ ನಿರ್ಮಾಣ ಮಾಡುವರೆಂದು ತಿಳಿಸಿದರು.

ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳಿರುತ್ತವೆ ಎಂದು ರುದ್ರೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಬೀಬಾ ನಿಶಾತ್, ಜಿಲ್ಲಾ ತೋಟಗಾರಿಕಾ ಸಂಘದ ಉಪಾಧ್ಯಕ್ಷ ಪ್ರಭಮಂಡಲ್ ಉಪಸ್ಥಿತರಿದ್ದರು.