ಮೈಸೂರು, ಜ.1- ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರು-ಗೋವಾ ನಡುವೆ ಶೀಘ್ರ ಮತ್ತೊಂದು ಹೆಚ್ಚುವರಿ ವಿಮಾನ ಸೇವೆ ಆರಂಭವಾಗಲಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮೈಸೂರು ಗೋವಾ ನಡುವೆ ನಿತ್ಯ ಹಾರಾಟ ನಡೆಸುತ್ತಿರುವ ಏರ್ ಅಲಯನ್ಸ್ ವಿಮಾನಕ್ಕೆ ಉತ್ತಮ ಪ್ರತಿಕ್ರಿಯೆ ಇದ್ದು, 65ರಿಂದ 70 ಮಂದಿ ಪ್ರಯಾಣಿಸುತ್ತಿದ್ದಾರೆ ಎಂದಿದ್ದು, ಗೋವಾ ಫ್ಲೈಟ್‍ಗೆ ಬೇಡಿಕೆ ಹೆಚ್ಚಿರುವುದರಿಂದ ಮತ್ತೊಂದು ಟ್ರಿಪ್ ಕಲ್ಪಿಸುವಂತೆ ನಾವು ಅಲಯನ್ಸ್ ಏರ್ ಸಂಸ್ಥೆಗೆ ಮನವಿ ಮಾಡಿ, ಪತ್ರ ವ್ಯವಹಾರ ನಡೆಸುತ್ತಿದ್ದೇವೆ. ಸಕಾರಾತ್ಮಕ ಸ್ಪಂದನೆ ಇರುವುದರಿಂದ ಈ ತಿಂಗಳಿನಿಂದಲೇ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಮೈಸೂರು-ಗೋವಾ ಮಾರ್ಗದಲ್ಲಿ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಿದೆ. ಹೊಸ ವರ್ಷಾಚರಣೆಗಂತೂ ಅತೀ ಹೆಚ್ಚು ಮಂದಿ ಗೋವಾಗೆ ಮತ್ತೊಂದು ವಿಮಾನ ಸೇವೆ ಆರಂಭಿಸಿ ಎಂದು ಕೇಳುತ್ತಿದ್ದರು. ನಮ್ಮ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ನಿರ್ಬಂಧ ವಿಧಿಸಿರುವುದರಿಂದ ಜನರು ಗೋವಾ ಕಡೆ ಹೋಗಲು ಆಸಕ್ತಿ ತೋರುತ್ತಿದ್ದರು. ಆದರೆ ಹೆಚ್ಚುವರಿ ವಿಮಾನ ಸೇವೆ ವ್ಯವಸ್ಥೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.
ಅದೇ ರೀತಿ ಹೈದರಾಬಾದ್, ಬೆಂಗಳೂರು, ಚೆನ್ನೈ ನಗರಗಳಿಗೆ ಸಂಚರಿಸುವ ವಿಮಾನಗಳಲ್ಲೂ ಬಹುತೇಕ ಸೀಟ್ ಭರ್ತಿಯಾಗುತ್ತಿವೆ. ಲಾಕ್‍ಡೌನ್ ನಿರ್ಬಂಧ ತೆರವುಗೊಂಡು ಕೋವಿಡ್-19 ಪ್ರಕರಣಗಳು ಕಡಿಮೆಯಾದ ನಂತರ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ ಎಂದು ಅವರು ತಿಳಿಸಿದರು.
