ಮಂಡ್ಯ, ಜು.21- ಸರ್ಕಾರದ ವ್ಯಾಪ್ತಿಯಲ್ಲಿರುವ ಮೈಶುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗೆ ನೀಡದೇ ಸರ್ಕಾರವೇ ಮುನ್ನಡೆಸಲಿದೆ ಜೊತೆ ಆಗಸ್ಟ್ ಮೊದಲವಾರು ಅಥವಾ 2ನೇ ವಾರದಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಕೃಷ್ಣರಾಜಸಾಗರದಲ್ಲಿ ಕಾವೇರಿ ಮಾತೆಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಸಕ್ಕರೆ ಕಾರ್ಖಾನೆ ನಡೆಸಲು ಇನ್ನೂ ಹೆಚ್ಚಿನ ಅನುದಾನ ಬೇಕಿದ್ದು,ಅನುದಾನವನ್ನು ಬ್ಯಾಂಕಿ ನಿಂದ ಹಾಗೂ ಸರ್ಕಾರದಿಂದ ಒದಗಿಸಲಾಗುವುದು ಎಂದರು.
ಕಾವೇರಿ ಜಲಾನಯನ ಪ್ರದೇಶದ 4 ಅಣೆಕಟ್ಟು ತುಂಬಿರುವುದು ಸಂತಸದ ವಿಷಯ.ನದಿ ಒಂದು ಪ್ರದೇಶದ ಸಂಸ್ಕøತಿಯನ್ನು ಬಿಂಬಿ ಸುತ್ತದೆ. ಕಾವೇರಿ ನದಿ ನಮ್ಮ ಜೀವನಾಡಿ.ಕೆ.ಆರ್.ಎಸ್.ಅಣೆಕಟ್ಟು ಕಟ್ಟಲು ಮೈಸೂರು ಮಹಾರಾಜರು ಮಾಡಿರುವ ತ್ಯಾಗ ಮತ್ತು ಶ್ರಮವನ್ನು ಮರೆಯಬಾರದು ಎಂದರು.
ರಾಜ್ಯ ಹಾಗೂ ದೇಶಾದ್ಯಂತ ಹಲವು ನೀರಾವರಿ ಯೋಜನೆಗಳು ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಕಾರಣಕರ್ತರಾದಂತಹ ಸರ್. ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದರು. 2008 ರಲ್ಲಿ ನೀರವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಕೆ.ಆರ್.ಎಸ್.ಗೆ ಭೇಟಿ ನೀಡಿದಾಗ ಗೇಟ್ ಗಳಲ್ಲಿ ರಂದ್ರ ಬಿದ್ದು ನೀರು ಸೋರಿಕೆಯನ್ನು ತಡೆಯಲು ಗೋಣಿಚೀಲ ಇಡಲಾಗಿತ್ತು.
300 ಕ್ಯೂಸ್ಯಕ್ಸ್ ನಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ ಎಂಬುದು ತಿಳಿಯಿತು. ನಂತರ ಇದನ್ನು ತಡೆಗಟ್ಟಬೇಕು ಎಂದು ಸಂಕಲ್ಪ ಮಾಡಿಗೇಟ್‍ಗಳನ್ನು ಬದಲಾವಣೆ ಮಾಡಲು ನಿರ್ಧಾರಿಸಲಾಯಿತು ಎಂದರು.
ಮೇಕೆದಾಟು ಯೋಜನೆಯ ಅಂತಿಮ ತೀರ್ಪು ಮುಂದಿನ ವಾರದೊಳಗೆ ಹೊರಬೀಳುವ ಸಾಧ್ಯತೆಯಿದೆ. ರಾಜ್ಯ ಸಿದ್ಧಪಡಿಸಿರುವ ಡಿಪಿಆರ್‍ಗೆ ಅನುಮೋದನೆ ದೊರೆತ ಬಳಿಕ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು. ಈ ಭಾಗದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ಸಮರ್ಪಣಾ ಭಾವನೆಯಿಂದ ನಾವು ಕೆಲಸ ಮಾಡಿದಾಗ ಜನ ನಮ್ಮನ್ನು ನೆನಪಿನಲ್ಲಿಡುತ್ತಾರೆ ಎಂದರು.
ಸಚಿವರಾದ ಗೋವಿಂದ ಎಂ. ಕಾರಜೋಳ, ಕೆ.ಗೋಪಾಲಯ್ಯ, ರೇಷ್ಮೆ, ಡಾ.ಕೆ.ಸಿ ನಾರಾಯಣ ಗೌಡ, ಎಸ್.ಟಿ ಸೋಮಶೇಖರ್, ವಿಧಾನಪರಿಷತ್ ಸದಸ್ಯರಾದ , ಮಧು ಜಿ.ಮಾದೇಗೌಡ,ದಿನೇಶ್ ಗೂಳಿಗೌಡ, ವಿಧಾನಸಭಾ ಶಾಸಕರುಗಳಾದ ಎಂ.ಶ್ರೀನಿವಾಸ್ ,ಡಿ.ಸಿ ತಮ್ಮಣ್ಣ, ಸಿ.ಎಸ್ ಪುಟ್ಟರಾಜು, ಕೆ.ಅನ್ನದಾನಿ,ರವೀಂದ್ರ ಶ್ರೀಕಂಠಯ್ಯ,ಎಲ್.ನಾಗೇಂದ್ರ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು ಸಿದ್ದಲಿಂಗಸ್ವಾಮಿ,ಕೃಷ್ಣರಾಜಸಾಗರ ಗ್ರಾಂ ಅಧ್ಯಕ್ಷ ಕೆ.ನರಸಿಂಹ, ಮೈಸೂರು ಮೇಯರ್ ಸುನಂದ ಪಾಲನೇತ್ರ, ಮಂಡ್ಯ ಜಿಲ್ಲಾಧಿಕಾರಿಗಳಾದ ಎಸ್. ಅಶ್ವತಿ,ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.