ಮೈಸೂರು, ಸೆ.4- ಈ ಬಾರಿ ಮೈಸೂರು ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸಾಧಾರಣ ದಸರಾ ಉತ್ಸವ ಆಚರಿಸಲಾಗಿತ್ತು. ಹೀಗಾಗಿ ಈ ಬಾರಿ ಅದ್ಧೂರಿ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ಅದ್ಧೂರಿ ದಸರಾ ಉತ್ಸವ ಆಚರಣೆ ಕುರಿತಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಉತ್ಸವದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು. ನಗರದ ಜಿಪಂ ಆವರಣದಲ್ಲಿರುವ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿಯ ದಿನಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಸಂಘ-ಸಂಸ್ಥೆಗಳು, ಕೈಗಾರಿಕೆಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‍ಗಳು ಹಾಗೂ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಎಲ್ಲಾ ಚಟುವಟಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಈ ಬಾರಿಯ ದಸರಾದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕೋವಿಡ್ 2ನೆ ಅಲೆ ಸಂದರ್ಭದಲ್ಲಿ ಮೈಸೂರು ಜಿಲ್ಲೇಯಲ್ಲಿರುವ ಹಲವಾರು ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳು ನೀಡಿದ ಸಹಕಾರಕ್ಕೆ ಅವರು ಇದೇ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.
ಎಸ್‍ಪಿ ಆರ್.ಚೇತನ್ ಮಾತನಾಡಿ, ಈ ಬಾರಿಯ ದಸರಾದಲ್ಲಿ ನಡೆಯುವ ಯುವ ದಸರಾ ಹಾಗೂ ಯುವ ಸಂಭ್ರಮದ ಕಾರ್ಯಕ್ರಮದಲ್ಲಿ ಬಾಲಿವುಡ್ ನೈಟ್ ಹಾಗೂ ಸ್ಯಾಂಡಲ್‍ವುಡ್ ನೈಟ್ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಬಾಲಿವುಡ್ ಹಾಗೂ ಸ್ಯಾಂಡಲ್‍ವುಡ್‍ನ ಹಲವಾರು ಸಂಗೀತಗಾರರು ಹಾಗೂ ನಟರನ್ನು ಕರೆಸಲು ತೀರ್ಮಾನಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ, ಈ ಬಾರಿಯ ದಸರಾದಲ್ಲಿ ಪ್ರಾಯೋಜಕತ್ವ ವಹಿಸುವ ಕಂಪೆನಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ದಸರಾ ಉತ್ಸವದ ಆಚರಣೆಗಾಗಿ 16 ಉಪಸಮಿತಿಗಳನ್ನು ರಚಿಸಲಾಗಿದೆ. ಈ ಉಪಸಮಿತಿಗಳ ವ್ಯಾಪ್ತಿಯಲ್ಲಿ ಪ್ರತಿದಿನ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ವಿವರಣೆ ನೀಡಿದರು.
ದಸರಾ ಚಲನಚಿತ್ರೋತ್ಸವಕ್ಕೆ ಒಂದು ಪರದೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಡಿಸಿಆರ್ ಚಿತ್ರಮಂದಿರದ ಮಾಲೀಕರು ಘೋಷಿಸಿದರು. ಕೋಕೋ ಕೋಲಾ, ಇಸ್ಕಾನ್, ಮುತ್ತೂಟ್ ಫೈನಾ, ಎಸ್‍ಬಿಐ ಸೇರಿದಂತೆ ಹಲವಾರು ಖಾಸಗಿ ಸಂಸ್ಥೆಗಳು ದಸರಾ ಪ್ರಾಯೋಜಕತ್ವ ವಹಿಸಲು ಮುಂದೆ ಬಂದಿವೆ.
ಈ ಬಾರಿಯ ದಸರಾದಲ್ಲಿ ಯುವ ಸಂಭ್ರಮ, ಯುವ ದಸರಾ, ರೈತ ದಸರಾ, ಕ್ರೀಡಾ ದಸರಾ ಸೇರಿದಂತೆ ಹಲವಾರು ಕಾರ್ಯಕ್ರಮ ಜರುಗಲಿದ್ದು, ಪ್ರಾಯೋಜಕತ್ವ ನೀಡುವವರು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಅಥವಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿ ಡಿಡಿ ಅಥವಾ ಚೆಕ್‍ಗಳನ್ನು ನೀಡಿ ಸ್ವೀಕೃತಿ ಪಡೆದುಕೊಳ್ಳಬಹುದಾಗಿದೆ.
ಸಭೆಯಲ್ಲಿ ಜಿಪಂ ಸಿಇಒ ಪೂರ್ಣಿಮಾ, ಡಿಸಿಪಿ ಗೀತಾ ಪ್ರಸನ್ನ ಮತ್ತಿತರ ಅಕಾರಿಗಳು, ವಿವಿಧ ಕಂಪೆನಿಗಳ ಪ್ರತಿನಿಗಳು ಹಾಜರಿದ್ದರು.