ನಾಡಹಬ್ಬ ದಸರಾಗೆ ಕ್ಷಣಗಣನೆ, ಮೈಸೂರಿನೆಲ್ಲೆಡೆ ಹೈಅಲರ್ಟ್, 5485 ಪೊಲೀಸ್ ಸಿಬ್ಬಂದಿ ನಿಯೋಜನೆ

Social Share

ಮೈಸೂರು,ಸೆ.25- ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದೆಲ್ಲೆಡೆ ವಿವಿಧ ಕಾರ್ಯಕ್ರಮಗಳು ಜರುಗುವುದರಿಂದ ಸುಗಮ ಸಂಚಾರ ವ್ಯವಸ್ಥೆಯ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೈಸೂರು ನಗರ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಹೊರ ಜಿಲ್ಲೆಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಗಳ ನಿಯೋಜಿಸಲಾಗುತ್ತಿದ್ದು, ಮೈಸೂರು ನಗರದಿಂದ 1255, ಹೊರಜಿಲ್ಲೆಗಳಿಂದ 3580 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, 650 ಗೃಹ ರಕ್ಷಕ ಸಿಬ್ಬಂದಿಗಳು ಸೇರಿದಂತೆ ಒಟ್ಟು 5485 ಸಂಖ್ಯೆಯ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮೊಬೈಲ್ ಕಮಾಂಡ್ ಸೆಂಟರ್ ಬಸ್ ನ್ನು ದಸರಾ ಮಹೋತ್ಸವದಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಬಸ್ಸಿನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು ಬಾಡಿ ಫೋರ್ಸ್ ಕ್ಯಾಮರಾಗಳು, ಲಾಂಗ್ ಡಿಸ್ಟೆನ್ಸ್ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿಗಳನ್ನು ತೆಗೆಯುವ ವ್ಯವಸ್ಥೆ ಇರಲಿದೆ ಎಂದರು.

ಅರಮನೆ ಮತ್ತು ಬನ್ನಿ ಮಂಟಪದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಕಾರಿಗಳಿಗೆ ಬಾಡಿಫೋರ್ಸ್ ಕ್ಯಾಮೆರಾ ವಿತರಣೆ, ಅಲ್ಲಿನ ಸಂಪೂರ್ಣ ದೃಶ್ಯಾ ವಳಿ ಈ ಕ್ಯಾಮರಾಗಳಲ್ಲಿ ಮತ್ತು ಮೊಬೈಲ್ ಕಮಾಂಡ್ ಸೆಂಟರ್ನಲ್ಲಿ ರೆಕಾರ್ಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಮುಖ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್ ಕ್ಯಾಮರಾಗಳಿಂದ ಕಣ್ಗಾವಲು ಮಾಡಲಾಗುವುದು ಎಂದರು.

ದಸರಾ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಪೊಲೀಸರು ಎದ್ದು ಕಾಣುವ ರೀತಿಯಲ್ಲಿ ಎತ್ತರದ ಪ್ಲಾಟ್ ಫಾರ್ಮ್ ಗಳನ್ನು ನಿರ್ಮಿಸಿ ಅದರ ಮೇಲೆ ಪೊಲೀಸರನ್ನು ಮೆಗಾ ಫೋನ್ ಸಮೇತ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಅಪರಾಧಗಳನ್ನು ತಡೆಗಟ್ಟಲು ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಅಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದರು.

ನಗರದ ಲಾಡ್ಜ್ಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ವಿಚಾರಣೆಗೊಳಪಡಿಸಲಾಗುತ್ತದೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ದಿನದ 24ಗಂಟೆ ನುರಿತ ಅಪರಾಧ ವಿಭಾಗದ ಸಿಬ್ಬಂದಿಗಳು ಗಸ್ತಿನಲ್ಲಿರುತ್ತಾರೆ ಎಂದು ತಿಳಿಸಿದರು.

ದಸರಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣ ಪೊಲೀಸ್ ವ್ಯವಸ್ಥೆ ಸ್ಥಳಕ್ಕೆ ತೆರಳಲು ಉತ್ತಮವಾದ ಗಸ್ತು ವಾಹನಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಕ್ಕೆ ಮುಂಚಿತವಾಗಿಯೇ 12 ಅಗ್ನಿಶಾಮಕ ದಳ ಮತ್ತು 8 ಆ್ಯಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ.

ಈಗಾಗಲೇ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಅಳವಡಿಸಿಕೊಂಡಿರುವ 13,140 ಸಿಸಿ ಕ್ಯಾಮರಾಗಳು ಇದ್ದು ಹೆಚ್ಚುವರಿಯಾಗಿ ಮೈಸೂರು ಅರಮನೆ, ಬನ್ನಿಮಂಟಪದ ಮೈದಾನ ಮೆರವಣಿಗೆ ಮಾರ್ಗ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ 110 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು ಇವುಗಳಲ್ಲಿ ದಿನದ 24ಗಂಟೆಯೂ ರೆಕಾರ್ಡ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ರೌಡಿ ಪರೇಡ್ ನಡೆಸಿ ರೌಡಿಗಳಿಗೆ ಅಹಿತಕರ ಘಟನೆ ನಡೆಸದಂತೆ ಕಟ್ಟೆಚ್ಚರ ನೀಡಲಾಗಿದೆ. ಗರುಡಾಫೋರ್ಸ್ ಮತ್ತು ಎಎನ್.ಎಫ್ ತಂಡಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ಬೆಟ್ಟಕ್ಕೆ ತೆರಳುವ ವಾಹನಗಳನ್ನು ಈಗಾಗಲೇ ಪ್ರವೇಶಕ್ಕೆ ಮುನ್ನ ಸಂಪೂರ್ಣ ತಪಾಸಣೆ ನಡೆಸಿಯೇ ಬಿಡಲಾಗುತ್ತಿದ್ದು, ಹೆಚ್ಚಿನ ಪೊಲೀಸ್ ಭದ್ರತೆಯನ್ನು ಚಾಮುಂಡಿಬೆಟ್ಟದಲ್ಲಿ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

Articles You Might Like

Share This Article