ಮೈಸೂರು,ಸೆ.28- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಾಳೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಚಾಲನೆ ನೀಡಲಿದ್ದಾರೆ.
ಈ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಡಾ.ಹೆಚ್. ಎಸ್.ಗೋಪಾಲಕೃಷ್ಣ ಮಾಹಿತಿ ನೀಡಿ ನಾಳೆ ಸಂಜೆ 4.30ಕ್ಕೆ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ಕೆ.ಸಿ.ನಾರಾಯಣ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಧ್ವಜಾರೋಹಣ ನಡೆಸಿಕೊಡಲಿದ್ದಾರೆ.
ಸೆ.29ರಿಂದ ಅ.2ರವರೆಗೆ ದಸರಾ ಕ್ರೀಡಾಕೂಟ ನಡೆಯಲಿದ್ದು ಸುಮಾರು 27ಬಗೆಯ ಕ್ರೀಡೆಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾಗಳಿಂದ 4ರಿಂದ 5ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಕ್ರೀಡಾಪಟುಗಳಿಗೆ ಊಟ, ವಸತಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ಈಗಾಗಲೇ ಕೆಲ ಕಲ್ಯಾಣ ಮಂಟಪಗಳು, ಹೋಟೆಲ್ ಗಳು ಸೇರಿ 2000ಕ್ಕೂ ಹೆಚ್ಚು ರೂಂಗಳನ್ನು ಕಾಯ್ದಿರಿಸಲಾಗಿದೆ. ವಸತಿ ಸ್ಥಳಗಳಿಂದ ಸ್ಪರ್ಧೆಗಳು ನಡೆಯುವ ಸ್ಥಳಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಬಜಾಜ್ ಅಲೈಯನ್ಸ ವತಿಯಿಂದ ಜೀವ ವಿಮೆ ಮಾಡಿಸಲಿದ್ದು ಈಗಾಗಲೇ 7.31 ಲಕ್ಷರೂ. ಪ್ರೀಮಿಯಂ ಹಣ ಪಾವತಿಸಲಾಗಿದೆ. ಮರಣ ಸಂಭವಿಸಿದಲ್ಲಿ ಮೂರು ಲಕ್ಷರೂ. ಶಾಶ್ವತ ಅಂಗವೈಕಲ್ಯತೆಗೆ ಮೂರು ಲಕ್ಷರೂ.,ಗಾಯಗೊಂಡ ವೈದ್ಯಕೀಯ ಚಿಕಿತ್ಸೆಗಾಗಿ 3ಲಕ್ಷರೂ.ವರೆಗೆ ವಿಮೆ ನೀಡಲಾಗುವುದು ಎಂದು ತಿಳಿಸಿದರು.
ದಸರಾ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನಾಳೆ ಬೆಳಿಗ್ಗೆ 8.30ಕ್ಕೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಯಲ್ಲಿ ಬೆಳಗಿಸಲಾಗುವುದು ಎಂದು ತಿಳಿಸಿದರು.