ಮೈಸೂರು, ಜ.16- ಪತಿ ಹೆಸರಿನಲ್ಲಿದ್ದ ಖಾಲಿ ನಿವೇಶನವನ್ನು ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ ತಾಲೂಕು ಬನ್ನೂರಿನ ವ್ಯಾಸರಾಜಪುರ ಗ್ರಾಮದಲ್ಲಿ ನಡೆದಿದೆ.ಚಿನ್ನಸ್ವಾಮಿ (46) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪಿ ಪ್ರತಾಪ್ ಗಿಲ್ಲಿಸಿದ್ದನಾಯಕ (34) ಪರಾರಿಯಾಗಿದ್ದಾನೆ.
ವ್ಯಾಸರಾಜಪುರದಲ್ಲಿರುವ ಖಾಲಿ ನಿವೇಶನವೊಂದು ಮನಸಿದ್ದನಾಯಕ ಎಂಬುವರ ಹೆಸರಿನಲ್ಲಿದೆ. ಕೆಲವು ವರ್ಷಗಳ ಹಿಂದೆ ಮನಸಿದ್ದನಾಯಕ ತೀರಿಕೊಂಡಿದ್ದು, ಈ ಖಾಲಿ ನಿವೇಶನವನ್ನು ಪತ್ನಿ ಚಿಕ್ಕಣ್ಣಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಇದಕ್ಕಾಗಿ ನಾಲ್ಕು ತಿಂಗಳ ಹಿಂದೆ ಮಾಜಿ ಛೇರ್ಮನ್ ನಾಗರಾಜು ಅವರಿಗೆ ಚಿಕ್ಕಣ್ಣಮ್ಮ 10 ಸಾವಿರ ಕೊಟ್ಟಿದ್ದರು. ಆದರೆ, ಖಾತೆ ಬದಲಾಯಿಸುವಲ್ಲಿ ನಾಗರಾಜ್ ವಿಫಲರಾಗಿದ್ದಾರೆ.
ಇದರಿಂದ ಕೋಪಗೊಂಡ ಚಿಕ್ಕಣ್ಣಮ್ಮ ಮಗ ಚಿನ್ನಸ್ವಾಮಿ ನಾಗರಾಜ್ಗೆ ಅವರ ಮನೆ ಮುಂದೆ ಬೈಯುತ್ತಿದ್ದಾಗ ಪ್ರತಾಪ್ ನಮ್ಮ ಚಿಕ್ಕಪ್ಪನಿಗೆ ಬೈದಿದ್ದಕ್ಕೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಒಂದು ಹಂತದಲ್ಲಿ ಮರದ ತುಂಡಿನಿಂದ ಚಿನ್ನಸ್ವಾಮಿ ತಲೆಗೆ ಪ್ರತಾಪ್ ಹೊಡೆದಿದ್ದಾನೆ. ಪ್ರಜ್ಞೆ ತಪ್ಪಿದ ಚಿನ್ನಸ್ವಾಮಿಯನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾ=ರಿಯಾಗದೆ ಇಂದು ಮುಂಜಾನೆ ಚಿನ್ನಸ್ವಾಮಿ ಮೃತಪಟ್ಟಿದ್ದಾರೆ.
ಕೊಲೆ ಮಾಡಿದ ಪ್ರತಾಪ್ ತಲೆ ಮರೆಸಿಕೊಂಡಿದ್ದು, ಬನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಮುಂದುವರೆಸಿದ್ದಾರೆ.
