ಬೆಂಗಳೂರು,ಫೆ.15- ರಾಜ್ಯಾದ್ಯಂತ ತೀವ್ರ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿರುವ ಹಿಜಾಬ್-ಕೇಸರಿ ಸಂಘರ್ಷಕ್ಕೆ ಪೂರ್ಣ ವಿರಾಮ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಪ್ರಸಕ್ತ ಅವೇಶನದಲ್ಲೇ ಏಕರೂಪದ ಸಮವಸ್ತ್ರ ನೀತಿ ಜಾರಿ ಮಾಡಲು ಮುಂದಾಗಿದೆ. ಪ್ರಸ್ತುತ ನಡೆಯುತ್ತಿರುವ ಜಂಟಿ ಅವೇಶನದಲ್ಲೇ ವಿಧಾನಮಂಡಲದ ಉಭಯ ಸದನಗಳಲ್ಲೇ ಹಾಲಿ ಇರುವ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಚಿಂತಿಸಿದೆ.
ಕರ್ನಾಟಕ ಹೈಕೋರ್ಟ್ ನೀಡುವ ಆದೇಶದ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಜಾರಿಗೊಳಿಸಲು ಸಮಿತಿ ರಚನೆ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಶೇ.75ರಷ್ಟು ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಈಗಾಗಲೇ ಜಾರಿಯಲ್ಲಿದೆ. ಎಸ್‍ಡಿಎಂಸಿ ಸಮಿತಿಗಳು ಈ ಕುರಿತು ತೀರ್ಮಾನ ಮಾಡಲಿದೆ.
ಮುಂಬರುವ 2022ರ ಜೂನ್‍ನಿಂದ ಆರಂಭವಾಗಲಿರುವ ಶೈಕ್ಷಣಿಕ ವರ್ಷದಿಂದ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತದೆ. ವಿದ್ಯಾರ್ಥಿನಿಯರಿಗೆ ಚೂಡಿದಾರ, ದುಪ್ಪಟ್ಟ ಮತ್ತು ವಿದ್ಯಾರ್ಥಿಗಳಿಗೆ ಫಾರ್ಮಲ್ ಪ್ಯಾಂಟ್ ಮತ್ತು ಶರ್ಟ್ ಅನ್ನು ಸಮವಸ್ತ್ರವಾಗಿ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಮವಸ್ತ್ರ ಧರಿಸದಿದ್ದರೆ ಈಗಿರುವ ಕಾಯ್ದೆಯಲ್ಲಿ ಯಾವುದೇ ಕ್ರಮಕ್ಕೆ ಅವಕಾಶ ಇಲ್ಲ. ಹೀಗಾಗಿ ತಿದ್ದುಪಡಿ ಕಾಯ್ದೆಯಲ್ಲಿ ಕ್ರಮದ ಬಗ್ಗೆ ಉಲ್ಲೇಖ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ನಿಯಮ ಮೀರಿದರೆ ಕ್ರಮ ತೆಗೆದುಕೊಳ್ಳಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ನೀಡಲಾಗುತ್ತದೆ.
ಇನ್ನು ಮುಂದೆ ಸರ್ಕಾರಿ ಅನುದಾನಿತ, ಅನುದಾನರಹಿತಾ ಶಾಲಾಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರ ನೀತಿಯನ್ನು ಜಾರಿ ಮಾಡಲಿದೆ.
ಇದರಂತೆ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಡ್ಡಾಯವಾಗಿ ಶಾಲಾ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರಗಳನ್ನೇ ಧರಿಸಬೇಕು.
ಪ್ರಸ್ತುತ ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರದ ಬಗ್ಗೆ ಸ್ಪಷ್ಟವಾದ ನೀತಿ ಇಲ್ಲದಿರುವ ಕಾರಣ ಈ ಗೊಂದಲ ಮೂಡಲು ಕಾರಣವಾಯಿತು.
ತಿದ್ದುಪಡಿಯಾಗಲಿರುವ ಕಾಯ್ದೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಶಾಲಾ ತರಗತಿಯೊಳಗೆ ಧರಿಸಿಕೊಂಡು ಬರಬೇಕು. ಶಾಲಾ ಆವರಣದೊಳಗೆ ಹಾಕಿಕೊಂಡು ಬಂದು ತರಗತಿ ಪ್ರವೇಶಿಸುವಾಗ ಹಿಜಾಬ್‍ನ್ನು ಪ್ರತ್ಯೇಕವಾಗಿ ತೆಗೆದಿಡಬೇಕಾಗುತ್ತದೆ.
ಒಂದು ವೇಳೆ ಯಾರಾದರೂ ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂತಹ ಶಾಲೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಇಲಾಖೆಯ ಅಕಾರಿಗಳ ಜೊತೆ ಚರ್ಚಿಸಲಾಗಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಶಾಲಾಕಾಲೇಜುಗಳಿಗೆ ಅಲ್ಲಿನ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರ ನೀತಿ ಹಾಗೂ ಈ ಬಗ್ಗೆ ದೇಶದ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಸಹ ಸರ್ಕಾರ ಈಗಾಗಲೇ ಅಧ್ಯಯನ ನಡೆಸಿದೆ. ಒಂದು ಸಮುದಾಯ ನಮ್ಮ ಧರ್ಮದ ಪ್ರಕಾರ ಹಿಜಾಬ್ ಧರಿಸಿಕೊಂಡೇ ಶಾಲಾಕಾಲೇಜುಗಳಿಗೆ ಬರುತ್ತೇವೆ ಎಂದರೆ, ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ನಾವು ಕೂಡ ಕೇಸರಿ ಶಾಲು, ತಲೆಗೆ ರುಮಾಲು, ಕೊರಳಿಗೆ ರುದ್ರಾಕ್ಷಿ ಹಾಕಿಕೊಂಡು ಬರುತ್ತೇವೆ ಎನ್ನುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಏಕರೂಪ ಸಮವಸ್ತ್ರ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಚ್ಚಳಿಕೆ ಅನಿವಾರ್ಯ: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಕಡ್ಡಾಯವಾಗಿ ಶಾಲಾ ಆಡಳಿತ ಮಂಡಳಿಯ ನೀತಿ ನಿಯಮಗಳನ್ನು ಪಾಲನೆ ಮಾಡುತ್ತೇವೆ ಎಂದು ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಮಕ್ಕಳಿಗೆ ಯಾವ ಸಮವಸ್ತ್ರವನ್ನು ನಿಗದಿಪಡಿಸುತ್ತಾರೋ ಅದನ್ನೇ ನಾವು ಧರಿಸಲು ಸೂಚನೆ ನೀಡುತ್ತೇವೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ಆಡಳಿತ ಮಂಡಳಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೂ ಬದ್ದವಾಗಿರುತ್ತೇವೆ ಎಂದು ಪತ್ರಕ್ಕೆ ಸಹಿ ಹಾಕಬೇಕು.
ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಭಾವನೆಗಳ ಪರ, ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿ ಆಗಲ್ಲ. ಶೈಕ್ಷಣಿಕ ಚಟುವಟಿಕೆಗಳು ಬಿಟ್ಟು ಇನ್ಯಾವುದೇ ಅನ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ವಿದ್ಯಾರ್ಥಿಗಳ ಜೊತೆ ಪೋಷಕರಿಂದಲೂ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
ತೀರ್ಪಿನ ಬಳಿಕ ಕಾಯ್ದೆ ಜಾರಿ:
ಪ್ರಸ್ತುತ ಸಮವಸ್ತ್ರ ಧರಿಸುವ ಕುರಿತಂತೆ ಉಂಟಾಗಿರುವ ವಿವಾದ ಮಧ್ಯೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಸ್ತೃತ ಪೀಠ ವಿಚಾರಣೆ ಮುಂದುವರೆಸಿದೆ. ನ್ಯಾಯಾಲಯ ತೀರ್ಪು ನೀಡಿದ ಬಳಿಕ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಲು ಮುಂದಾಗಿದೆ.
