ಬೆಂಗಳೂರು, ಜೂ.25- ನಯಾ ಪೈಸೆಯಷ್ಟೂ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡಿರುವ 55.32 ಕೋಟಿ ರೂ.ಗಳ ಬೃಹತ್ ವಂಚನೆ ಪ್ರಕರಣ ಸಚಿವ ಜಮೀರ್ ಅಹಮದ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದಲ್ಲಿ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
2020 – 2022 ರ ಅವಧಿಯಲ್ಲಿ 47 ಕಾಮಗಾರಿಗಳಿಗೆ ಟೆಂಡರ್ ಗಳನ್ನು ಕರೆದು, ಪೂರ್ವ ನಿಗದಿತ 19 ಮಂದಿ ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರಗಳನ್ನು ನೀಡಲಾಗಿತ್ತು. ಈ ರೀತಿ ಕಾರ್ಯಾದೇಶ ಪತ್ರಗಳನ್ನು ಪಡೆದ 19 ಮಂದಿ ಗುತ್ತಿಗೆದಾರರು ಒಂದು ಬಿಡಿಗಾಸಿನಷ್ಟೂ ಸಹ ಕಾಮಗಾರಿಗಳನ್ನು ಮಾಡದೆಯೇ 27,66,00,000 ಗಳಷ್ಟು ಬೃಹತ್ ಮೊತ್ತವನ್ನು ತಮ್ಮ ರಾಜಕೀಯ ಪ್ರಭಾವದಿಂದ ಬಿಡುಗಡೆ ಮಾಡಿಸಿಕೊಂಡಿದ್ದರು.
ಇದೀಗ, ಎರಡೂವರೆ ವರ್ಷಗಳ ನಂತರ – 2024-25 ರಲ್ಲಿ ಮತ್ತೊಮ್ಮೆ ಅದೇ 47 ಕಾಮಗಾರಿಗಳಿಗೆ, ಅದೇ 19 ಮಂದಿ ವಂಚಕ ಗುತ್ತಿಗೆದಾರರಿಗೆ 27,66,00,000 ರೂಗಳನ್ನು ಎರಡನೇ ಸಲ ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಚಾಮರಾಜಪೇಟೆಯಲ್ಲಿ ಉಮೇಶ್, ರಾಧಾಕೃಷ್ಣ, ತಿಮರಸು, ಭಾಸ್ಕರ್ ರೆಡ್ಡಿ ಎಂಬ ಕಾರ್ಯಪಾಲಕ ಅಭಿಯಂತರರುಗಳು, ಸಂಗೀತ ಎಂಬ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸತೀಶ್ ಕುಮಾರ್ ಎ., ಸೈಯದ್ ಸಮರ್, ಗಿರಿಧರ, ಅರುಣ್ ಕುಮಾರ್ ಎಂ., ಸೌಮ್ಯ, ರಘು ಜಿ., ಶ್ರೀನಿವಾಸ ರಾಜು ಎಂಬ ಸಹಾಯಕ ಅಭಿಯಂತರರುಗಳು ವಂಚಕ ಗುತ್ತಿಗೆದಾರರೊಂದಿಗೆ ಷಾಮಿಲ್ಲಾಗಿದ್ದಾರೆ ಎಂದು ಅವರು ದೂರಿದ್ದಾರೆ.
ನಿರ್ವಹಿಸದೇ ಇರುವ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡುವ ಸಂಬಂಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಟ್ಟು 55,32,00,000 ರೂಪಾಯಿಗಳಷ್ಟು ಬೃಹತ್ ಮೊತ್ತದ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವಲ್ಲಿ ವಂಚಕರು ಯಶಸ್ವಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಚಾಮರಾಜಪೇಟೆ ಕ್ಷೇತ್ರದ ಈ 47 ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಕಲಿಯಾಗಿ ತಯಾರಿಸಲಾಗಿದೆ. ಬೇರೆಡೆ ಮಾಡಿರುವ ಕಾಮಗಾರಿಗಳ ಛಾಯಾಚಿತ್ರಗಳನ್ನು ತೆಗೆದು ಈ 47 ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಲಗತ್ತಿಸಲಾಗಿದೆ. ಈ ಕುರಿತಂತೆ ಬಿಬಿಎಂಪಿ ಮಾಜಿ ಸದಸ್ಯರಾಗಿರುವ ಕಾಂಗ್ರೆಸ್ ಪಕ್ಷದವರೇ ಆದ ಶ್ರೀನಿವಾಸ ಮೂರ್ತಿ ಎಂಬುವರು ಅಕ್ರಮದ ತನಿಖೆಗೆ ಆಗ್ರಹಿಸಿದ್ದರು.
ಮಾತ್ರವಲ್ಲ, ಈ ಹಿಂದೆ 2015-16 ರಲ್ಲಿ ಇದೇ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳನ್ನು ನಿರ್ವಹಿಸದೆಯೇ 9,60,00,000 ಮೊತ್ತದ ಬೃಹತ್ ಹಗರಣೞೞಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ನಾನು ನೀಡಿದ್ದ ದೂರಿನ ಆಧಾರದ ಮೇಲೆ ಆಗಿನ ಕಾರ್ಯಪಾಲಕ ಅಭಿಯಂತರ ತನ್ವೀರ್ ಅಹಮದ್, ಉಮೇಶ್ ಮತ್ತಿತರರನ್ನು ಪೊಲೀಸರು ಬಂಧಿಸಿದ್ದರು. ಈ ಹಗರಣದ ಪ್ರಮುಖ ಪಾತ್ರಧಾರಿ ಗುತ್ತಿಗೆದಾರ ಚಂದ್ರಪ್ಪ ಅಲಿಯಾಸ್ ಪೆಟ್ಟಿಕೋಟ್ ಚಂದ್ರಪ್ಪ ಪೋಲೀಸರ ಕೈಗೆ ಸಿಗದೆ ಪರಾರಿಯಾಗಿ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ.
ಇಷ್ಟಾದರೂ ಎಚ್ಚೆತ್ತುಕೊಳ್ಳದ ಸಚಿವ ಜಮೀರ್ ಅವರು ಈ ಅಕ್ರಮಗಳಿಗೆ ಸಾಥ್ ನೀಡುತ್ತಿದ್ದಾರೆ. ಈ ಎಲ್ಲ ಅವ್ಯವಹಾರಗಳ ಹಿಂದೆ ಅವರ ಬಲಗೈ ಭಂಟ ಅಯೂಬ್ ಖಾನ್ ಇದ್ದಾರೆ ಎಂದು ಅವರು ಆರೋಪಿಸಿದ್ಧಾರೆ.
ಹಣ ಬಿಡುಗಡೆ ಮಾಡಿರುವ ಮತ್ತು ಸಂಪೂರ್ಣ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ 12 ಮಂದಿ ಭ್ರಷ್ಟ ಅಧಿಕಾರಿಗಳು ಹಾಗೂ 19 ಮಂದಿ ವಂಚಕ ಗುತ್ತಿಗೆದಾರರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಈ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳನ್ನು ರಮೇಶ್ ಆಗ್ರಹಿಸಿದ್ದಾರೆ.
ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಚಾಮರಾಜಪೇಟೆ ವಿಭಾಗದ ಎಲ್ಲಾ 12 ಮಂದಿ ಭ್ರಷ್ಟ ಅಧಿಕಾರಿಗಳು ಹಾಗೂ 19 ಮಂದಿ ವಂಚಕ ಗುತ್ತಿಗೆದಾರರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತ ಪೊಲೀಸರಿಗೆ ರಮೇಶ್ ದೂರು ನೀಡಿದ್ದಾರೆ.
- ಪ್ರಿಯತಮನೊಂದಿಗೆ ಸೇರಿ ಪತಿ ಕೊಂದಿದ್ದ ಪತ್ನಿ : ಸಾಕ್ಷಿ ಹೇಳಿದ 3 ವರ್ಷದ ಮಗು
- ರೈಲ್ವೆ ಪ್ಲಾಟ್ಫಾರ್ಮ್ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಯೋಧನಿಗೆ ಸೇನೆ ಶ್ಲಾಘನೆ
- ಹಾವೇರಿ : ಹೃದಯಾಘಾತ ಲಾರಿ ಚಾಲಕ ಸಾವು
- ನಾಳೆ ಭಾರತ್ ಬಂದ್ : ಬ್ಯಾಂಕಿಂಗ್ ಸೇರಿದಂತೆ ದೇಶದಾದ್ಯಂತ ಅನೇಕ ಸೇವೆಗಳು ವ್ಯತ್ಯಯ
- ಡಿಕೆಶಿ ಸಿಎಂ ಆದರೆ ಸಾಕು, ನನಗೆ ಸಚಿವ ಸ್ಥಾನ ಬೇಡ : ಸಿ.ಪಿ.ಯೋಗೇಶ್ವರ್