ರಾಜಿನಾಮೆ ಸಲ್ಲಿಸಲು ನಾಗೇಶ್‍ಗೆ ಸಿಎಂ ಸೂಚನೆ

Spread the love

ಬೆಂಗಳೂರು,ಜ.13- ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಬಕಾರಿ ಸಚಿವ ಎಚ್.ನಾಗೇಶ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ವರಿಷ್ಟರ ಸೂಚನೆಯಂತೆ ತಾವೂ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂಪುಟದಿಂದ ಕಿತ್ತುಹಾಕುವಂತಹ ಪರಿಸ್ಥಿತಿ ನಿರ್ಮಾಣ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಸಂಜೆಯೊಳಗೆ ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ನಾನೇ ಸಂಪುಟದಿಂದ ವಜಾಗೊಳಿಸಿ ರಾಜ್ಯಪಾಲರಿಗೆ ಪತ್ರ ಕಳುಹಿಸಬೇಕಾಗುತ್ತದೆ. ನೀವು ಕೂಡಲೇ ರಾಜೀನಾಮೆ ನೀಡಬೇಕೆಂದು ಸಿಎಂ ಸಚಿವ ಸಂಪುಟ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಮಧ್ಯ ಪ್ರವೇಶ ಮಾಡಿದ ನಾಗೇಶ್, ನಾನು ಯಾವ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಾಡಿರುವ ತಪ್ಪಾದರು ಏನು ? ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ನಾನೂ ಕೂಡ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನನ್ನು ಸಂಪುಟದಿಂದ ಕೈ ಬಿಡಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡರು ಎನ್ನಲಾಗಿದೆ. ನಾನು ನಿಮ್ಮನ್ನು ಸಂಪುಟದಿಂದ ಕೈ ಬಿಡಬೇಕೆಂಬ ಇಚ್ಚೆಹೊಂದಿಲ್ಲ. ವರಿಷ್ಟರೇ ನಿಮ್ಮನ್ನು ಕೈ ಬಿಡಬೇಕೆಂದು ಸೂಚಿಸಿದ್ದಾರೆ. ಹಾಗಾಗಿ ಅದನ್ನು ಪಾಲನೆ ಮಾಡಬೇಕಾದ ಇಕ್ಕಟ್ಟಿನಲ್ಲಿದ್ದೇನೆ ಎಂದು ಸಿಎಂ ಮನವರಿಕೆ ಮಾಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಸಚಿವರಾದ ನಂತರ ನೀವು ಇಲಾಖೆಯಲ್ಲಿ ಎಷ್ಟು ವರಮಾನ ಸಂಗ್ರಹಿಸಬೇಕೆಂದು ಸೂಚನೆ ಕೊಟ್ಟಿದ್ದಿರೋ ಅದರಂತೆ ಬೊಕ್ಕಸಕ್ಕೆ ಆದಾಯ ಕೊಟ್ಟಿದ್ದೇನೆ. ಅಲ್ಲದೆ, ಇಲಾಖೆಯಲ್ಲೂ ಪಾರದರ್ಶಕತೆಯನ್ನು ತಂದಿದ್ದೇನೆ. ಏಕಾಏಕಿ ನನ್ನನ್ನು ಸಂಪುಟದಿಂದ ಕಿತ್ತು ಹಾಕಲು ಕಾರಣವಾದರೂ ಏನು ಎಂದು ಪ್ರಶ್ನಿಸಿದ್ದರು.

ನಿಮ್ಮ ಬಗ್ಗೆ ನನಗೆ ಗೌರವವಿದೆ. ಆದರೆ, ಅಧಿಕಾರಿಯೊಬ್ಬರ ವರ್ಗಾವಣೆ ವಿಷಯದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಿರಿ ಎಂಬ ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಸ್ವತಃ ರಾಷ್ಟ್ರೀಯ ನಾಯಕರೇ ಆಂತರಿಕ ತನಿಖೆ ನಡೆಸಿದ್ದಾರೆ. ಅಲ್ಲದೆ, ಅಧಿಕಾರಿಯ ಪುತ್ರಿಯು ಪ್ರಧಾನಮಂತ್ರಿಯವರ ಅಧಿಕೃತ ಟ್ವಿಟರ್‍ಗೆ ನೀವು ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ದಾಖಲಿಸಿಕೊಂಡು ಹ್ಯಾಶ್‍ಟ್ಯಾಗ್ ಮಾಡಿದ್ದಾರೆ. ನಿಮ್ಮನ್ನು ಅನಿವಾರ್ಯವಾಗಿ ಸಂಪುಟದಿಂದ ಕೈ ಬಿಡಬೇಕಾಗುತ್ತದೆ. ಮುಂದೆ ಅವಕಾಶ ಸಿಕ್ಕಾಗ ನೋಡೋಣ ಎಂದು ಆಶ್ವಾಸನೆ ನೀಡಿದ್ದಾರೆ.

ಇದರಿಂದ ಅಸಮಾಧಾನಗೊಂಡ ನಾಗೇಶ್, ಒಲ್ಲದ ಮನಸ್ಸಿನಿಂದಲೇ ಸಭೆಯಿಂದ ನಿರ್ಗಮಿಸಿದರು. ಸಂಪುಟಸಭೆ ಮುಗಿದ ಬಳಿಕ ಹೊರಗೆ ಬಂದ ನಾಗೇಶ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಕೋಪದಿಂದಲೇ ನಿರ್ಗಮಿಸಿದರು.

Facebook Comments