ಸಿದ್ದರಾಮಯ್ಯ ಮಾತಾಡಿಲ್ಲ ಅಂದ್ರೆ ಕಾಂಗ್ರೆಸ್‍ನಲ್ಲಿ ಕಳೆದು ಹೋಗ್ತಾರೆ : ಕಟೀಲ್

ದಾವಣಗೆರೆ,ಜ.6- ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸದಾ ಪ್ರಚಾರದಲ್ಲಿ ಇರಬೇಕೆಂದು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಏನನ್ನಾದರೂ ಮಾತನಾಡದೇ ಇದ್ದರೆ ಕಾಂಗ್ರೆಸ್‍ನಲ್ಲಿ ಕಳೆದು ಹೋಗ್ತಾರೆ.

ಸಿದ್ದರಾಮಯ್ಯಗೆ ಗೋಹತ್ಯೆ, ಆರ್‍ಎಸ್‍ಎಸ್ ಮೇಲೆ ಕೋಪ ಇಲ್ಲ. ಬದಲಿಗೆ ಕಾಂಗ್ರೆಸ್‍ನಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಅವರು ತಮ್ಮ ಕೋಪವನ್ನು ಡಿಕೆಶಿ ಮೇಲೆ ತೋರುವ ಬದಲು ಬಿಜೆಪಿ ವಿರುದ್ಧ ಏನೇನೋ ಮಾತನಾಡುತ್ತಿದ್ದಾರೆ ಎಂದರು. ಕಾಂಗ್ರೆಸ್‍ನಲ್ಲಿ ಡಿಕೆಶಿ ಪ್ರಭಾವ ಹೆಚ್ಚಾಗಿ ಎಲ್ಲಾ ಕಡೆ ಅವರೇ ಕಾಣುತ್ತಿರುವುದರಿಂದ ಸಿದ್ದರಾಮಯ್ಯ ಹೀಗೆಲ್ಲ ಮಾಡುತ್ತಿದ್ದಾರೆ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ್ನ ಮುಗಿಸಲು ಪ್ರತಿದಿನ ಸಿದ್ದರಾಮಯ್ಯನವರು ಬಿಜೆಪಿ ನಾಯಕರ ಬಗ್ಗೆ ಮಾಧ್ಯಮಗಳಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಮಧ್ಯೆ ಸ್ಪರ್ಧೆ ಹೆಚ್ಚಾಗಿದೆ. ಆದ್ದರಿಂದ ಕಾಂಗ್ರೆಸ್‍ನಲ್ಲಿ ಒಳ ಜಗಳ ಹೆಚ್ಚಾಗಿದೆ ಎಂದು ಕಟೀಲ್ ಆರೋಪಿಸಿದ್ದಾರೆ.

ಆರ್‍ಎಸ್‍ಎಸ್‍ಗೆ ಅದರದ್ದೇ ಆದ ಕೆಲಸ ಕಾರ್ಯಗಳಿವೆ. ಎಲ್ಲಾ ಸಮುದಾಯಗಳನ್ನು ಜೋಡಿಸುವ ಕಾರ್ಯವನ್ನು ಆರ್‍ಎಸ್‍ಎಸ್ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.