ಯಾವ ಸಂದರ್ಭದಲ್ಲಾದರೂ ಸಂಪುಟ ರಚನೆಯಾಗಬಹುದು : ಕಟೀಲ್

ಬೆಂಗಳೂರು, ಜು.28- ವರಿಷ್ಠರು ಸೂಚನೆ ನೀಡಿದರೆ ಯಾವ ಸಂದರ್ಭದಲ್ಲಾದರೂ ಸಂಪುಟ ವಿಸ್ತರಣೆಯಾಗಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ರಾಜ್ಯ ಘಟಕದೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡು ನಂತರ ಸೂಚನೆ ನೀಡಲಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಈ ವಾರದಲ್ಲೇ ಸಂಪುಟ ವಿಸ್ತರಣೆ ಆದರೂ ಆಗಬಹುದು ಎಂದು ಹೇಳಿದರು.

ಯಾರಿಗೆ ಯಾವ ಸ್ಥಾನವನ್ನು ಯಾವಾಗ ನೀಡಬೇಕು ಎಂಬುದನ್ನು ಆಯಾ ಕಾಲ ಕಾಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಮ್ಮಲ್ಲಿ ಯಾವುದೇ ಲಾಬಿ ನಡೆಯುವುದಿಲ್ಲ. ಸಾಮಥ್ರ್ಯ ಹಾಗೂ ಸೇವೆಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಸ್ಥಾನ ನೀಡಲಾಗುವುದು ಎಂದರು.

ಯಾರನ್ನು ವಲಸಿಗರು ಎಂದು ಕರೆಯುವುದಿಲ್ಲ. ಪಕ್ಷ ಸಿದ್ಧಾಂತವನ್ನು ಒಪ್ಪಿ ಪ್ರಾಥಮಿಕ ಸದಸ್ಯತ್ವ ಪಡೆದು ಉಪ ಚುನಾವಣೆಯನ್ನು ಗೆದ್ದು ಬಂದಿದ್ದಾರೆ. ಅವರು ಸಹ ಬಿಜೆಪಿಯವರೇ. ಹಾಗಾಗಿ ಸ್ಥಾನಮಾನ ನೀಡುವಲ್ಲಿಯೂ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಹೇಳಿದರು.

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಇದ್ದ ಸಣ್ಣ ಪುಟ್ಟ ಸಮಸ್ಯೆಗಳು ಇತ್ಯರ್ಥವಾಗಿವೆ. ರಾಜ್ಯದಲ್ಲಿ ಉದ್ಭವಿಸುವ ನೆರೆ ಹಾವಳಿ ಹಾಗೂ ಕೋವಿಡ್ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸಿ ಕಾರ್ಯ ಪ್ರವೃತ್ತರಾಗಿದ್ದವರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಯಾರೂ ಕೂಡ ಹಿನ್ನಡೆ, ಮುನ್ನಡೆ ಎಂದು ಭಾವಿಸಬೇಕಿಲ್ಲ.

ಬೊಮ್ಮಾಯಿ ಅವರಿಗೆ ಅನುಭವ ಇದೆ. ಹಾಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಎಲ್ಲಾ ಶಾಸಕರು ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದರು. ಸ್ವತಂತ್ರ ಆಡಳಿತ ನಡೆಸುತ್ತಾರೆ. ಬಿಎಸ್‍ವೈ ಅವರ ಛಾಯೆ ಎಂದು ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.