ಬೆಂಗಳೂರು,ಜ.25- ಕಾಂಗ್ರೆಸ್ ಸಂಪರ್ಕದಲ್ಲಿರುವ ಒಬ್ಬೇ ಒಬ್ಬ ಶಾಸಕರಾಗಲಿ ಅಥವಾ ಸಚಿವರ ಹೆಸರಾಗಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಕತ್ತಲಲ್ಲಿ ಬೆಕ್ಕು ಹುಡುಕುವ ಕಳ್ಳಾಟ ಮಾಡುತ್ತಿದ್ದಾರೆ. ನಿಮ್ಮ ಪಕ್ಷದ ಸಹವಾಸವೇ ಬೇಡ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯ ತತ್ವ ಸಿದ್ದಾಂತವನ್ನು ಒಪ್ಪಿ ಬಂದಿರುವವರು ಪುನಃ ಆ ಪಕ್ಷಕ್ಕೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಳ್ಳಾಟ ಶುರು ಮಾಡಿದ್ದಾರೆ. ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮೊದಲು ನೀವು ಭ್ರಮೆಯಿಂದ ಆಚೆ ಬನ್ನಿ ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಯಾವುದೇ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿಲ್ಲ. ನಮ್ಮ ಪಕ್ಷವು ಶಿಸ್ತು, ನಿಯಮದ ಅಡಿಯಲ್ಲಿದೆ. ಯಾವುದೇ ಅಭಿಪ್ರಾಯಗಳಿದ್ರೂ ಪಕ್ಷದ ವೇದಿಕೆಯಲ್ಲಿ ಹೇಳಬೇಕು. ಮಾಧ್ಯಮಗಳ ಮೂಲಕ ನೋಡಿದ್ದೇನೆ, ಅಂಥಹವರನ್ನ ಕರೆದು ಮಾತಾಡುತ್ತಾರೆ. ಕೆಲವರಿಗೆ ನೊಟೀಸ್ ಕೊಡಲು ಚಿಂತಿಸಿದ್ದೇವೆ. ಅದಕ್ಕೂ ಮುಂದೆ ಹೋದರೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಕೊರೋನಾ ಮೂರನೇ ಅಲೆ ಇದೆ. ಮನೆ ಮನೆಗಳಿಗೆ ಆಹಾರ ಒದಗಿಸುವ ಕೆಲಸ ಮಾಡಿದ್ದೇವೆ. ಮೂರನೇ ಅಲೆಯಲ್ಲೂ ಜನರ ಸೇವೆ ಮಾಡುವಂತೆ ಹೇಳಿದ್ದೇವೆ. ವ್ಯಾಕ್ಸಿನ್ ಒದಗಿಸುವಂತೆ ಹೇಳಿದ್ದೇವೆ. ಬಿಬಿಎಂಪಿ ಚುನಾವಣೆ ಬಗ್ಗೆ ಪೂರ್ವ ತಯಾರಿಯಾಗಿದೆ.ರಾಜ್ಯದಲ್ಲಿ ಅತೀ ದೊಡ್ಡ ಪಾರ್ಟಿ ಬಿಜೆಪಿ ಆಗಿದೆ. ಶಕ್ತಿಕೇಂದ್ರಗಳಿಂದ ಮತಗಟ್ಟೆ ಆಗಿದೆ. ಪೇಜ್ ಕಮಿಟಿಗಳು ಯಶಸ್ವಿಯಾಗಿದೆ. ನಾಮಪತ್ರ ಜೋಡಣೆ ಮೂಲಕ ಕಾರ್ಯ ವಿಸ್ತರಣೆ ಆಗಿದೆ.
ಬಿಬಿಎಂಪಿ ಚುನಾವಣೆ ಎದುರಿಸಲು ಹಲವು ಸುತ್ತಿನ ಮಾತುಕತೆ. ಚುನಾವಣೆಗೆ ಪ್ರಭಾರಿಗಳ ನೇಮಕ ಬಗ್ಗೆ ಚರ್ಚೆ ಮಾಡಿದ್ದೇವೆ. ವಿಸ್ತಾರಕ್ ಯೋಜನೆ ಬಗ್ಗೆ ನಾವು ತೀರ್ಮಾನಿಸಿದ್ದೇವೆ. ಸೇವೆಯೂ ಮಾಡಬೇಕು, ರಾಜಕಾರಣವೂ ಮಾಡಬೇಕು ಎಂದರು. ಬಿಎಸ್ ವೈ, ಬೊಮ್ಮಾಯಿ ಉತ್ತಮ ಆಡಳಿತ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಬಿಬಿಎಂಪಿ ಗೆಲ್ಲುವ ಗುರಿ ಯಿದೆ, ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಿಗಲಿದೆ. ಕಾಂಗ್ರೆಸ್ ಮುಕ್ತ ಭಾರತ ಆಗುವುದು ಖಚಿತ. ಎಲ್ಲಾ ಸಮೀಕ್ಷೆಗಳು ಬಿಜೆಪಿ ಪರ ಇದೆ. ಕಾಂಗ್ರೆಸ್ ನಿಜ ರೂಪ ಬಯಲಾಗಿದೆ ಮೊದಲಿನಿಂದಲೂ ಕಾಂಗ್ರೆಸ್ ಇಬ್ಭಗೆಯ ನೀತಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಅಲ್ಪ ಸಂಖ್ಯಾತರ ಜೊತೆಗೆ ಪಾಕಿಸ್ತಾನದ ಪ್ರಧಾನಿ ಈ ದೇಶದ ಸಿಎಂಗೆ ಕರೆ ಮಾಡುತ್ತಾರೆ. ಇಂಥಹವರಿಗೆ ಅಕಾರ ಕೊಡಿ ಎಂದು ಒತ್ತಡ ಹಾಕುತ್ತಾರೆ. ಪಾಕಿಸ್ತಾನ ಜೊತೆ ಕಾಂಗ್ರೆಸ್ ಸಂಬಂಧ ಇರುವುದು ಸಾಬೀತಾಗಿದೆ. ಕಾಂಗ್ರೆಸ್ ನಿಜ ಬಣ್ಣ ಬಯಾಳಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ದೇಶ ವಿರೋ ಕೆಲಸ ಮಾಡುತ್ತಿದೆ. ಐದು ರಾಜ್ಯಗಳಲ್ಲೂ ಬೇರೆ ಬೇರೆ ಪಕ್ಷಗಳಿಂದ ಬರುತ್ತಿದ್ದಾರೆ. ರಾಜ್ಯದಲ್ಲೂ 16 ಜನ ಬಿಜೆಪಿಗೆ ಬಂದಿದ್ದಾರೆ. ಯಾವುದೇ ಶಾಸಕರು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ರಾಷ್ಟ್ರೀಯ ನಾಯಕರು ಯೋಚನೆ ಮಾಡುತ್ತಾರೆ ಎಂದರು.
ಈಗಾಗಲೇ ಸಿಎಂ ಕೂಡ ಅದನ್ನ ಸ್ಪಷ್ಟಪಡಿಸಿದ್ದಾರೆ. ಸಿಎಂ ಹಾಗೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಮುಂದಿನ ವರ್ಷವೂ ಪೂರ್ಣ ಮಾಡುತ್ತಾರೆ.
ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಷ್ಟ್ರೀಯ ನಿಯಮಗಳನ್ನ ತಂದಿದ್ದಾರೆ. ಅದರಂತೆ ಸಿಎಂ ಉಸ್ತುವಾರಿಗಳನ್ನ ನೇಮಕ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿಗಳಿಗೆ ಕೊಟ್ಟಿರುವ ಜವಾಬ್ದಾರಿ ಚೆನ್ನಾಗಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್‍ನವರು ಹಗಲು ಕನಸು ಕಾಣುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂಬುದು ಅವರಿಗೆ ಅರ್ಥ ಆಗಿದೆ. ಅದಕ್ಕೆ ಜನರ ಮನಸ್ಸು ವಿಷಯಂತರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
