ಕರಾವಳಿಯನ್ನು ತಾಲಿಬಾನ್ ಆಗಲು ಬಿಡಲ್ಲ : ಕಟೀಲ್ ಕೆಂಡ

Social Share

ಮಂಗಳೂರು ,ಫೆ.5 ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ಹಿಜಾಬ್ ಅಥವಾ ಇಂತಹ ಯಾವುದೇ ಘಟನೆಗಳಿಗೆ ಆಸ್ಪದವಿಲ್ಲ. ನಮ್ಮ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕರಾವಳಿ ಪ್ರದೇಶವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹಿಜಾಬ್ ವಿವಾದದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಶಾಲಾ-ಕಾಲೇಜು ಎನ್ನುವುದು ಸರಸ್ವತಿ ಮಂದಿರವಾಗಿದ್ದು, ಅಲ್ಲಿ ಶಾಲೆಯ ನಿಯಮಗಳೊಂದಿಗೆ ಶಿಕ್ಷಣ ಪಡೆಯುವುದು ಧರ್ಮ. ಶಾಲೆಯೊಳಗೆ ಬೇರೆ ಧರ್ಮವನ್ನು ತರುವುದು ಸರಿಯಲ್ಲ. ಶಾಲೆಯಲ್ಲಿ ಶಾಲೆಯ ನಿಯಮದಡಿ ವ್ಯಾಸಂಗ ಮಾಡಬೇಕು. ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಯಾರಿಗೆ ಇಂತಹ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಮನಸ್ಸಿಲ್ಲವೋ ಅವರು ಬೇರೆ ದಾರಿ ಹುಡುಕಿಕೊಳ್ಳಲಿ ಎಂದರು.
ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವುದನ್ನು ನಾನು ನೋಡಿದ್ದೇನೆ. ಅವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ನಡೆಸಿ ಸಾಮರಸ್ಯ ಹಾಳು ಮಾಡಿದ್ದಾರೆ. ಶಾದಿಭಾಗ್ಯದ ಹೆಸರಿನಲ್ಲಿ ಕೆಲವೇ ಕೆಲವು ಸಮುದಾಯಗಳಿಗೆ ಯೋಜನೆ ನೀಡಿದ್ದರು. ಈಗ ಇವರು ಹಿಜಾಬ್ ಬಗ್ಗೆ ಮಾತನಾಡುತ್ತಾರೆ.  ಸಿದ್ದರಾಮಯ್ಯ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಹಿಜಾಬ್ ವಿಚಾರವೀಗ ನ್ಯಾಯಾಲಯದಲ್ಲಿದೆ. ಅಲ್ಲಿಂದ ಯಾವ ರೀತಿಯ ನಿರ್ದೇಶನ ಬರುತ್ತದೆಯೆಂದು ಕಾದು ನೋಡೋಣ ಎಂದರು.

Articles You Might Like

Share This Article