ದೇವನಹಳ್ಳಿ, ಜು. 25- ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಲೋಕಾಯುಕ್ತದ ಹಲ್ಲು ಕಿತ್ತಿದ್ದು ಇದೇ ಸಿದ್ದರಾಮಣ್ಣ. ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು. ಇದೆಲ್ಲ ಅವರಿಗೆ ಗೊತ್ತಿತ್ತು. ಬಿಜೆಪಿ ಇಂತಹ ಕೆಲಸ ಮಾಡಲ್ಲ. ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ದೊಡ್ಡಬಳ್ಳಾಪುರಕ್ಕೆ ಹೋಗುವ ವೇಳೆ ಪ್ರವಾಸಿಮಂದಿರಕ್ಕೆ ಬಂದಿದ್ದ ಸಂದರ್ಭದಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿಗೆ ಸ್ವಾತಂತ್ರ್ಯ ಶಕ್ತಿಯನ್ನು ಎಸಿಬಿಗೂ ಸ್ವಾತಂತ್ರ್ಯ ಶಕ್ತಿಯನ್ನು ಬಿಜೆಪಿ ಕೊಟ್ಟಿದೆ. ಅವರು ಸ್ವತಂತ್ರವಾಗಿ ತನಿಖೆ ಮಾಡಬಹುದು.
ಮಾಜಿ ಸಚಿವ ಈಶ್ವರಪ್ಪ ವಿರುದ್ದ ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಆರೋಪಿಗಳನ್ನಾಗಿ ಮಾಡಿದರು. ಆದರೆ ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತು ಆಗಿದೆ. ಮುಂದೆ ಮುಖ್ಯಮಂತ್ರಿಗಳು ಅವರನ್ನು ಸಚಿವಸ್ಥಾನಕ್ಕೆ ಈಶ್ವರಪ್ಪ ಅವರನ್ನು ತೆಗೆದುಕೊಳ್ಳುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು.
ಕಳೆದ ಮೂರುವರ್ಷಗಳಿಂದ ಬಿಜೆಪಿ ಸರ್ಕಾರ ಬಂದಿದೆ. ಅದರಲ್ಲಿ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಆಡಳಿತದ ಅವಯಲ್ಲಿ ಒಂದುಕಡೆ ಬರಗಾಲ, ಇನ್ನೊಂದು ಕಡೆ ನೆರೆಹಾವಳಿ ಹಾಗೂ ಕೋವಿಡ್ 19 ಸಂಕಷ್ಟಗಳು ಎದುರಾದರೂ ಸಹ ಸರ್ಕಾರ ಉತ್ತಮ ರೀತಿಯಲ್ಲಿ ಅಭಿವೃದ್ದಿಗೆ ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸಿದೆ.
ಇಡೀ ರಾಷ್ಟ್ರದಲ್ಲಿ ಕೊರೋನಾ ನಿರ್ವಹಣೆಯಲ್ಲಿ ಮತ್ತು ಲಸಿಕೆ ನೀಡುವಲ್ಲಿ ರಾಜ್ಯವು ಪ್ರಥಮ ಸ್ಥಾನದ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.ಇದೀಗ ಕಳೆದ ಒಂದು ವರ್ಷದಿಂದ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದು, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಹೋಗುತ್ತಿದೆ.
ದೊಡ್ಡಬಳ್ಳಾಪುರದಲ್ಲಿ ಜುಲೈ 28ರಂದು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಲಾಗುವುದು. ಈಗ ಜಿ.ಪಂ. ಮತ್ತು ತಾ.ಪಂ. ಚುನಾವಣೆಯು ನ್ಯಾಯಾಲಯದಲ್ಲಿದ್ದು ನ್ಯಾಯಾಲಯದ ತೀರ್ಪು ಬಂದರೆ ಚುನಾವಣೆ ನಡೆಸಲು ಸಿದ್ದ. ಅದೇ ರೀತಿಯಾಗಿ ಮುಂದಿನ 2023ರ ಏಪ್ರಿಲ್ನಲ್ಲಿ ರಾಜ್ಯ ದಲ್ಲಿ ವಿಧಾನಸಭಾ ಚುನಾವಣೆಯು ನಡೆಯುವುದು ಖಚಿತ ಎಂದು ಹೇಳಿದರು.
ಇನ್ನೂ ಮದುವೆ ದಿನಾಂಕವೇ ನಿಗಯಾಗಿಲ್ಲ. ನಿಶ್ಚಿತಾರ್ಥ ಆಗಿಲ್ಲ. ಮದುವೆಯಾಗಿ ಮಗು ಹುಟ್ಟಿಲ್ಲ. ಆದರೂ ಕಾಂಗ್ರೆಸ್ ನವರು ಪ್ರೀಕೆಜಿಗೆ ಶಾಲೆಯಲ್ಲಿ ಸೀಟು ಕೇಳುತ್ತಿದ್ದಾರೆ. ಕಾಂಗ್ರೆಸ್ಗೆ ಮುಂದಿನ ಚುನಾವಣೆಯಲ್ಲಿ ಬಹುಮತ ಎಂಬ ಅಂತರಿಕ ಸಮೀಕ್ಷೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಾಯಕರ ಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಸಿದ್ದರಾಮಯ್ಯ ಗುಂಪಿಗೆ ಎಷ್ಟು ಸೀಟು, ಡಿಕೆಶಿ ಗುಂಪಿಗೆ ಎಷ್ಟು ಸೀಟು ಎನ್ನುವ ಚರ್ಚೆ ಆಗುತ್ತಿದೆ.
ಅವರ ಒಳ ಜಗಳ ಬೀದಿಗೆ ಬಂದು ನಿಂತಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಜಮೀರ್ ಅಹಮದ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವರು ಸಿಎಂ ರೇಸ್ನಲ್ಲಿದ್ದಾರೆ. ಕಾಂಗ್ರೆಸ್ ಸ್ಪಷ್ಟವಾಗಿ ಎರಡು ಹೋಳು ತುಂಡಾಗಿ ಬಿಜೆಪಿಯು 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ.
ಈಗಾಗಲೇ ಮೂರು ಹಂತದಲ್ಲಿ ಸರ್ವೆಗಳನ್ನು ಮಾಡಿಸಿದ್ದೇವೆ. ಗುಪ್ತಚರ ಇಲಾಖೆ ಮತ್ತು ಮಾಧ್ಯಮದವರ ಸಮೀಕ್ಷೆ ಪ್ರಕಾರ 120 ಸ್ಥಾನಗಳನ್ನು ಪಡೆಯಲಿದೆ. ಆಂತರಿಕ ಸಮೀಕ್ಷೆ ಮಾಡಿದ್ದು ಕಾಂಗ್ರೆಸ್ ಜನರ ದೃಷ್ಟಿ ಬೇರೆ ಕಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಗೆಲ್ಲುವುದು ಖಚಿತವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಮಾಜಿ ಶಾಸಕ ಜಿ.ಚಂದ್ರಣ್ಣ, ರಾಜ್ಯ ಎಸ್.ಸಿ.ಮೋರ್ಚ ಖಜಾಂಚಿ ಕೆ.ನಾಗೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್, ಜಿಲ್ಲಾ ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಾಬು, ಭೂನ್ಯಾಯಮಂಡಳಿ ಸದಸ್ಯ ವಿಜಯಪುರ ಗಿರೀಶ್, ನಾಮಿನಿ ಪುರಸಭಾ ಸದಸ್ಯ ಕನಕರಾಜು, ಪುನೀತ, ಮಧುಸೂದನ್, ಸಾಮಾಜಿಕ ಜಾಲತಾಣದ ತಾಲೂಕು ಸಂಚಾಲಕ ಮನೋಜ್ ಕುಮಾರ್ ಮತ್ತಿತರರು ಹಾಜರಿದ್ದರು.