ಕಾಂಗ್ರೆಸ್‍ನ್ನು ಶಾಶ್ವತ ನಿದ್ರೆಗೆ ಕಳುಹಿಸಲು ಜನ ಸಜ್ಜಾಗಿದ್ದಾರೆ : ಕಟೀಲ್

Social Share

ಬೆಂಗಳೂರು,ಫೆ.19- ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲೂ ಕಾಂಗ್ರೆಸ್‍ನ್ನು ಶಾಶ್ವತ ನಿದ್ರೆಗೆ ಕಳುಹಿಸಲು ನಾಗರಿಕರು ಸಜ್ಜಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜನರ ದಿಕ್ಕು ತಪ್ಪಿಸಲು ಅಹೋರಾತ್ರಿ ನಿದ್ರಾ ಧರಣಿಯ ಮೂಲಕ ಕಾಂಗ್ರೆಸ್ ಅನಗತ್ಯ ಕೆಲಸಕ್ಕೆ ಕೈ ಹಾಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‍ಗೆ ಈಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಯಾವುದೇ ವಿಷಯ ಇಲ್ಲ. ಜವಾಬ್ದಾರಿಯುತ ವಿಪಕ್ಷ ಯಾವ ವಿಷಯಕ್ಕೆ ಹೋರಾಡುತ್ತಿದೆ ಎಂಬ ಬಗ್ಗೆ ಪ್ರಜ್ಞಾವಂತ ನಾಗರಿಕರು ಗಮನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿವಾದವೇ ಇಲ್ಲದ ವಿಷಯಗಳಿಗೆ ಸದನದಲ್ಲಿ ಮಲಗುವುದರಿಂದ ರಾಜ್ಯದ ಜನತೆಗೆ ಏನು ಪ್ರಯೋಜನವಾಗುತ್ತೆ ಎನ್ನುವುದಕ್ಕೆ ಕಾಂಗ್ರೆಸ್ ಮುಖಂಡರ ಬಳಿ ಉತ್ತರ ಇಲ್ಲ. ಅನಗತ್ಯ ಧರಣಿ ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿರುವುದಕ್ಕೆ ಸಾಕ್ಷಿ. ಸದನದಲ್ಲಿ ಆರೋಗ್ಯಪೂರ್ಣ ಚರ್ಚೆಯಿಂದ ಪಲಾಯನವಾದ ಮಾಡುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಅಭಿವೃದ್ಧಿಗಿಂತ ತಮ್ಮ ಸ್ವಪ್ರತಿಷ್ಟೆ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಯಶಸ್ವಿ ಕ್ರಮಗಳು, ಅಭಿವೃದ್ಧಿ ಯೋಜನೆಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡರು ವಿಷಯಾಂತರ ಮಾಡಲು ಧರಣಿಯ ನಾಟಕಕ್ಕೆ ಕೈ ಹಾಕಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಶಾಸಕರು ವಿಧಾನಸೌಧದಲ್ಲಿ ಮಲಗುವುದರಿಂದ ಅವರು ಅದಕ್ಕೆ ಮಾತ್ರ ಲಾಯಕ್ ಎಂದು ರಾಜ್ಯದ ನಾಗರಿಕರಿಗೆ ಅನಿಸಿದೆ.
ಕಾಂಗ್ರೆಸ್ ಶಾಸಕರನ್ನು ಆರಿಸಿ ಕಳುಹಿಸಿದ ಮತದಾರರು ಇವರ ಬೇಜವಾಬ್ದಾರಿ ನಡೆಯಿಂದ ಭ್ರಮನಿರಸನಗೊಂಡಿದ್ದಾರೆ. ಕಾಂಗ್ರೆಸ್ ಸದನದಲ್ಲಿ ಜನರ ಪರವಾಗಿರದೇ, ಸದನದ ಕಲಾಪಗಳಿಗೆ ಅಡ್ಡಿ ಮಾಡುವ ಮೂಲಕ ಜನರಿಗೆ ಅನ್ಯಾಯ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Articles You Might Like

Share This Article