ಬೆಂಗಳೂರು,ಆ.1- ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಸತ್ಯಾಂಶ ಎರಡು ದಿನಗಳಲ್ಲಿ ಹೊರ ಬೀಳುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕಾಗಿ ಹಂತಕರು ಕೊಲೆ ಮಾಡಿದ್ದಾರೆ ಎಂಬುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ. ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು, ಪ್ರವೀಣ್ ನೆಟ್ಟಾರ್ ಮನೆಗೆ ಹೋಗಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ಇದನ್ನು ಕೆಲವರು ಸಿಎಂ ಹಿಂದೂಗಳ ಮನೆಗೆ ಹೋಗಿದ್ದು, ಮುಸ್ಲಿಮರ ಮನೆಗೆ ಹೋಗಿಲ್ಲ ಎಂದು ಟೀಕಿಸಿದ್ದಾರೆ. ಯಾರೊಬ್ಬರೂ ಕೂಡ ಕೊಲೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಒಂದು ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಸಿದ್ದಾರೆ. ಅವರು ನೂರಕ್ಕೆ ನೂರು ಆಯ್ಕೆ ಆಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಚಿಂಚನಸೂರ್ ಕಾಂಗ್ರೆಸ್‍ನಲ್ಲಿದ್ದರು, ಬಿಜೆಪಿ ಗೆಲ್ಲಲು ಆ ಭಾಗದಲ್ಲಿ ಕೆಲಸ ಮಾಡಿದ್ದರು. ಅವರ ಕೊಡುಗೆ ನಮ್ಮ ಪಕ್ಷಕ್ಕೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೈಕಮಾಂಡ್ ನಾಯಕರ ಸೂಚನೆಯಂತೆ ಬಾಬೂರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಸಿದ್ದಾರೆ. ಚಿಂಚನಸೂರ್ ಅವರು ಮೊದಲು ಕಾಂಗ್ರೆಸ್ ನಲ್ಲಿ ಇದ್ದರು. ಸಚಿವರಾಗಿ ಕೆಲಸ ಮಾಡಿದ ಹಿರಿಯ ರಾಜಕಾರಣಿ. ಪಕ್ಷಕ್ಕಾಗಿ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಮಾತನಾಡಿ, ನನಗೆ ಎಲ್ಲಿ ವಯಸ್ಸಾಗಿದೆ? ಮದ್ವೆ ಗಂಡು ಇದ್ಹಂಗಿದೀನಿ. ನಾನು, ಮಾಲೀಕಯ್ಯ ಗುತ್ತೇದಾರ್ ಜೋಡೆತ್ತು ಇದ್ಹಂಗೆ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ವಿರೋಧ ಪಕ್ಷದವರಿಗೇನು ಕೆಲಸ. ಬೊಗಳುತ್ತಲೇ ಇರುತ್ತಾರೆ. ಇನ್ನೂ ಓಡಾಡಬೇಕು. ಬಿಜೆಪಿಯನ್ನು ಮತ್ತೆ ಅಕಾರಕ್ಕೆ ತರಬೇಕು. 8 ತಿಂಗಳಷ್ಟೇ ಗುರುಮಟ್ಕಲ್ ಕ್ಷೇತ್ರದಿಂದ ಮತ್ತೆ ನಾನೇ ಅಭ್ಯರ್ಥಿಯಾಗಿದ್ದೇನೆ ಎಂದು ಘೋಷಣೆ ಮಾಡಿದರು.
ವಿಧಾನಪರಿಷತ್ ಸದ್ಯ ಎನ್.ರವಿಕುಮಾರ್ ಮಾತನಾಡಿ, ದಕ್ಷಿಣಕನ್ನಡದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶೀಘ್ರದಲ್ಲೇಕೊಲೆಗಡುಕರ ಬಂಧನವಾಗಲಿದೆ. ನಮ್ಮ ನಾಯಕರು ಫಾಜೀಲ್ ಮನೆಗೂ ಹೋಗುತ್ತಾರೆ. ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದರು.
ಮೊನ್ನೆ ಪ್ರವೀಣ್ ಮನೆಗೆ ಸಿಎಂ ಹೋಗಿದ್ದಾಗ ಸಂದರ್ಭ ಬೇರೆ ಇತ್ತು. ಆಗ ಸಿಎಂಗೆ ಮಸೂದ್ ಮನೆಗೆ ಹೋಗಲಿಕ್ಕಾಗದ ಸಂದರ್ಭ ಇತ್ತು ಸಂದರ್ಭ ಬಂದಾಗ ಸಿಎಂ ಫಾಜಿಲ್ ಮತ್ತು ಮಸೂದ್ ಮನೆಗೂ ಹೋಗಿಬರುತ್ತಾರೆ. ಸಿಎಂಗೆ ಯಾವ ಸಂದರ್ಭದಲ್ಲಿ ಅವರ ಮನೆಗೆ ಹೋಗಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು.