ಬೆಂಗಳೂರು,ಜು.22- ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 480 ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಿಮ್ಹಾನ್ಸ್ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಿದುಳು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ವಿಶೇಷ ಕ್ಲಿನಿಕ್ ಸ್ಥಾಪಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ 243 ವಾರ್ಡ್‍ಗಳಲ್ಲೂ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುವುದು. ರಾಜ್ಯದ ಪ್ರತಿಯೊಬ್ಬರಿಗೂ ನೇತ್ರ ತಪಾಸಣೆ ಕೈಗೊಂಡು ಅಗತ್ಯವಿದ್ದರೆ ಉಚಿತ ಕನ್ನಡಕ ನೀಡಲಾಗುವುದು. ಕಣ್ಣಿನ ಪರೆಯ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡಲಾಗುವುದು. ಆರೋಗ್ಯ ಸೇವೆಯನ್ನು ಸರ್ಕಾರ ಮೂಲಭೂತ ಹಕ್ಕು ಎಂದು ಭಾವಿಸಿದ್ದು, ಶ್ರೇಷ್ಠ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ರಾಜ್ಯದ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತ ಕಾರ್ಯಕ್ರಮವನ್ನು ಮೆಚ್ಚಿ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ವಿಸ್ತರಣೆ ಮಾಡುವ ಘೋಷಣೆ ಮಾಡಿದೆ. ಕ್ರಿಕೆಟ್‍ಪಟು ರಾಬಿನ್ ಉತ್ತಪ್ಪ ಅವರು ಮಾನಸಿಕ ಆರೋಗ್ಯ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ. ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊದಲ ಬ್ರೈನ್ ಹೆಲ್ತ್ ಕ್ಲಿನಿಕ್‍ನ್ನು ಉದ್ಘಾಟನೆ ಮಾಡಲಾಗಿದೆ.
ಮಾನಸಿಕ ರೋಗಿಗಳಿಗೆ ಆರಂಭಿಕ ಚಿಕಿತ್ಸೆ ನೀಡುವ ಬಗ್ಗೆ ನಿಮ್ಹಾನ್ಸ್‍ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂರು ವೈದ್ಯರಿಗೆ ತರಬೇತಿ ನೀಡಲಾಗಿದೆ. ಮಾನಸಿಕ ರೋಗಕ್ಕೆ ಸಂಬಂಧಿಸಿದಂತೆ ಎಲ್ಲರೂ ನಿಮ್ಹಾನ್ಸ್‍ಗೆ ಬರುವ ಅಗತ್ಯವಿಲ್ಲ. ಆರಂಭಿಕ ಹಂತದಲ್ಲಿ ತರಬೇತಿ ಪಡೆದಂತಹ ಈ ವೈದ್ಯರ ಬಳಿ ಚಿಕಿತ್ಸೆ ಪಡೆಯಬಹುದು. 3ನೇ ಹಂತದ ಅಥವಾ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ನಿಮ್ಹಾನ್ಸ್‍ಗೆ ಬರಬೇಕಾಗುತ್ತದೆ ಎಂದರು.
ಖಾಸಗಿ ಆ್ಯಂಬುಲೆನ್ಸ್‍ಗಳ ದರ ಪರಿಷ್ಕರಣೆಯನ್ನು ಸಾರಿಗೆ ಇಲಾಖೆ ಮಾಡುತ್ತದೆ. ರೋಗಿ ಹಾಗೂ ಅವರ ಸಂಬಂಧಿಕರಿಗೆ ದುಬಾರಿ ದರ ವಿಧಿಸುತ್ತಿರುವ ಬಗ್ಗೆ ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗುವುದು. ಬೇಕಾಬಿಟ್ಟಿ ದರ ವಿಧಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದ ಅವರು, ಸರ್ಕಾರಿ ಆ್ಯಂಬುಲೆನ್ಸ್‍ಗಳ ಸೇವೆ ಉಚಿತವಾಗಿ ದೊರೆಯುತ್ತಿದೆ ಎಂದು ಹೇಳಿದರು.
ನಗರಪ್ರದೇಶಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿದೆ. ಆದರೂ ಆತಂಕಪಡುವ ಅಗತ್ಯವಿಲ್ಲ. ಈ ವ್ಯಾಧಿ ಅಷ್ಟೊಂದು ತೀವ್ರವಾಗಿ ಉಲ್ಭಣವಾಗುತ್ತಿಲ್ಲ. ರೋಗಕ್ಕೆ ಸಂಬಂಧಿಸಿದ ಮಾದರಿಗಳನ್ನು ಕಳುಹಿಸಿ ಅಲ್ಲಿ ವಿಶೇಷ ತಳಿ ರೂಪಾಂತರಗೊಂಡಿರುವ ಬಗ್ಗೆ ಮಾಹಿತಿ ದೊರೆತರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.