ಬೆಂಗಳೂರಿಗರಿಗೊಂದು ಸಂತಸದ ಸುದ್ದಿ..!

Metro--04

ಬೆಂಗಳೂರು,ಜೂ.18-ನಗರದ ಜನತೆಗೆ ಸಂತಸದ ಸುದ್ದಿ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸುವುದು ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಮೆಟ್ರೋ ರೈಲು ಸೇವೆ ಒದಗಿಸುವ ನಿಟ್ಟಿನಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಸದ್ಯದಲ್ಲೇ ಸಂಚರಿಸಲಿದೆ. ಬರುವ ಶುಕ್ರವಾರದಿಂದ ನಮ್ಮ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್(ಬೈಯಪ್ಪನಹಳ್ಳಿ-ಮೈಸೂರು ರಸ್ತೆ) ನಡುವೆ ಇನ್ನು ಮುಂದೆ ಆರು ಬೋಗಿಗಳ ಮೆಟ್ರೋ ರೈಲು ಸಂಚರಿಸಲಿದೆ.

ನಮ್ಮ ಮೆಟ್ರೋ ಯೋಜನೆಯ 1ನೇ ಹಂತ ಪೂರ್ಣಗೊಂಡು ಒಂದು ವರ್ಷ ಮುಗಿದಿರುವ ಹಿನ್ನೆಲೆಯಲ್ಲಿ ಇದರ ಅಂಗವಾಗಿ ಆರು ಬೋಗಿಗಳ ರೈಲನ್ನು ಓಡಿಸಲು ಅ„ಕಾರಿಗಳು ತೀರ್ಮಾನಿಸಿದ್ದಾರೆ.  ಒಂದು ಬೋಗಿಯಲ್ಲಿ 150 ಮಂದಿ ಪ್ರಯಾಣಿಸಬಹುದು. 6 ಬೋಗಿಗಳು ಸಂಚರಿಸುವುದರಿಂದ ಏಕಕಾಲಕ್ಕೆ 900 ಪ್ರಯಾಣಿಕರನ್ನು ನಮ್ಮ ಮೆಟ್ರೋ ಹೊತ್ತಯ್ಯಲಿದೆ. ಈ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೋಗಿಗಳನ್ನು ಹೆಚ್ಚಳ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು.

ಈಗ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ನಮ್ಮ ಮೆಟ್ರೋ ರೈಲು ಅ„ಕಾರಿಗಳು 6 ಬೋಗಿಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಬೋಗಿಗಳ ಸಂಖ್ಯೆಯು ದುಪ್ಪಟ್ಟುಗೊಂಡಿರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ. 2019ರ ಜೂನ್ ಒಳಗಾಗಿ ನಮ್ಮ ಮೆಟ್ರೋ ಒಂದನೇ ಹಂತದ ಸಂಪರ್ಕ ಕಲ್ಪಿಸುವ ರೈಲಿಗೆ ಆರು ಬೋಗಿಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ, ಯಲೆಚೇನಹಳ್ಳಿಯಿಂದ ನಾಗಸಂದ್ರದವರೆಗೂ ಸಂಚಾರ ನಡೆಸುತ್ತದೆ. ಈ ಭಾಗದಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಲಾಗುವುದು.

ದಾಖಲೆಯ ಪ್ರಯಾಣಿಕರು:
ನಮ್ಮ ಮೆಟ್ರೋ ರೈಲಿನಲ್ಲಿ ಕಳೆದ ಒಂದು ವರ್ಷದ ಅವ„ಯಲ್ಲಿ 12 ಕೋಟಿ ಪ್ರಯಾಣಿಕರು ಸಂಚರಿಸಿ ದಾಖಲೆಯನ್ನು ನಿರ್ಮಿಸಿದ್ದಾರೆ. ದೇಶದ ಇತರೆ ಭಾಗಗಳಲ್ಲಿರುವ ನವದೆಹಲಿ, ಹೈದರಾಬಾದ್, ಚೆನ್ನೈ, ಅಹಮದಾಬಾದ್ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸಿದೆ.

ಟಿಕೆಟ್ ದರ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪುವುದು, ಪ್ರಯಾಣಿಕರ ಸುರಕ್ಷತೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿರುವ ಪರಿಣಾಮ ದಿನದಿಂದ ದಿನಕ್ಕೆ ಪ್ರಯಾಣಿಕರನ್ನು ಮೆಟ್ರೊ ರೈಲು ಆಕರ್ಷಿಸುತ್ತಿದೆ.2017ರಲ್ಲಿ ದಿನವೊಂದಕ್ಕೆ ಮೆಟ್ರೋ ರೈಲಿನಲ್ಲಿ 1.61 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. 2018ರಲ್ಲಿ ಇದರ ಪ್ರಮಾಣ 3.40 ಲಕ್ಷಕ್ಕೆ ಏರಿಕೆಯಾಗಿದೆ. ಬೈಯಪ್ಪನಹಳ್ಳಿ -ಮೈಸೂರು ರಸ್ತೆ, ಯಲೆಚೇÀನಹಳ್ಳಿ-ನಾಗಸಂದ್ರನಡುವೆ ಸಂಚರಿಸುವ ಮೆಟ್ರೋ ರೈಲಿಗೆ 6 ಬೋಗಿಗಳನ್ನು ಅಳವಡಿಸಿದರೆ ಪ್ರಯಾಣಿಕರ ಸಂಖ್ಯೆ 5 ಲಕ್ಷ ಏರಿಕೆಯಾಗುವ ಸಾಧ್ಯತೆ ಇದೆ.

Sri Raghav

Admin