ವಿಧಿ ನೀನೆಷ್ಟು ಕ್ರೂರಿ ; ಬಾಲ ಕಲಾವಿದೆ ಸಮನ್ವಿ ನಿಧನಕ್ಕೆ ಕಂಬನಿ

Social Share

ಬೆಂಗಳೂರು, ಜ.14- ಕನ್ನಡ ಕಿರುತೆರೆ ಪಾಲಿಗೆ ಮಕರ ಸಂಕ್ರಾಂತಿಗೆ ಸೂತಕದ ಛಾಯೆ ಆವರಿಸಿ ಬಾಲ ಕಲಾವಿದೆ ಸಮನ್ವಿ (6) ನಿಧನಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ನಿನ್ನೆ ಸಂಜೆ 5 ಗಂಟೆ ಸುಮಾರಿನಲ್ಲಿ ಕಿರುತೆರೆ ಕಲಾವಿದರಾದ ಅಮೃತಾ ನಾಯ್ಡು ಅವರು ಮಗಳು ಸಮನ್ವಿ ಯನ್ನು ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ವಾಜರಹಳ್ಳಿಯಿಂದ ಮೆಟ್ರೋ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಕನಕಪುರ ಮುಖ್ಯರಸ್ತೆಯ ಕೋಣನಕುಂಟೆ ಕ್ರಾಸ್ ಬಳಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ತಾಯಿ-ಮಗಳು ಇಬ್ಬರೂ ಕೆಳಗೆ ಬಿದ್ದಾಗ ಮಗಳಿಗೆ ಲಾರಿಯ ಬಂಪರ್ ಹೊಡೆದಿದ್ದರಿಂದ ಗಂಭೀರ ಪೆಟ್ಟಾಗಿ ರಕ್ತಸ್ರಾವವಾಗಿದೆ. ತಕ್ಷಣ ಸಾರ್ವಜನಿಕರ ಸಹಾಯದಿಂದ ಮಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಮೃತಾ ಕುಟುಂಬ ಆಘಾತಕ್ಕೊಳಗಾಗಿದೆ. ಕಿರುತೆರೆ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಸಮನ್ವಿ ಎಲ್ಲರ ಮನೆ ಮಾತಾಗಿದ್ದಳು. ಮನರಂಜನಾ ಲೋಕದಲ್ಲಿ ಸಾಧನೆ ಮಾಡಬೇಕಾಗಿದ್ದ ಸಮನ್ವಿ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿರುವುದು ನೋವಿನ ಸಂಗತಿ.
ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಎಲ್ಲಾ ಮಕ್ಕಳ ಜತೆ ಆಟವಾಡುತ್ತಾ, ಪಟಪಟನೆ ಮಾತನಾಡುತ್ತಿದ್ದ ಚಿನಕುರುಳಿ ಸಮನ್ವಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ಸಮನ್ವಿ ನಿಧನಕ್ಕೆ ಕಿರುತೆರೆಯಲ್ಲದೆ, ರಿಯಾಲಿಟಿ ಶೋ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.ತಾಯಿ ಅಮೃತಾ ಬಾಳಲ್ಲಿ ಸಮನ್ವಿ ಬೆಳಕು ಮೂಡಿಸಿದ್ದಳು. ಮಗಳ ಜತೆ ರಿಯಾಲಿಟಿ ಶೋನಲ್ಲಿ ಹಾಡಿ ಕುಣಿದಿದ್ದ ಅಮೃತಾ ಬಾಳಲ್ಲಿ ವಿ ಬೇರೆಯಾಟವಾಡಿದೆ. ಮಗಳನ್ನು ಕಳೆದುಕೊಂಡಿರುವ ಅಪ್ಪ-ಅಮ್ಮನ ರೋದನ ಮುಗಿಲು ಮುಟ್ಟಿತ್ತು.
ಕುಟುಂಬಸ್ಥರು, ಸ್ನೇಹಿತರು, ಸಂಬಂಕರು, ಕಲಾವಿದರು ಸಮನ್ವಿ ನಿಧನಕ್ಕೆ ಕಂಬನಿ ಮಿಡಿದು ಅಮೃತಾ ದಂಪತಿಗೆ ಸಾಂತ್ವನ ಹೇಳಿದ್ದಾರೆ.ತಾರಮ್ಮ ಕಣ್ಣೀರು: ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜಡ್ಜ್‍ಗಳ ಪೈಕಿ ನಟಿ ತಾರಾ (ತಾರಮ್ಮ) ಸಮನ್ವಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ದುಃಖತಪ್ತರಾಗಿ ಮಾತನಾಡಿ, ನನಗೆ ಈ ಸುದ್ದಿ ನಂಬಲಾಗುತ್ತಿಲ್ಲ. ಏಳೆಂಟು ವಾರ ಆ ಬಾಲಕಿ ನಮ್ಮ ಜತೆ ಇದ್ದಳು. ನನಗೆ ಎಲ್ಲ ಮಕ್ಕಳೊಂದಿಗೆ ಆಪ್ತತೆ ಪ್ರಾರಂಭವಾಗಿಬಿಟ್ಟಿದೆ. ಆ ಶೋನ ಎಲ್ಲ ಮಕ್ಕಳು ನನ್ನ ಕುಟುಂಬ ಸದಸ್ಯರೆಂಬಂತೆ ಭಾಸವಾಗಿದೆ. ಇದೀಗ ಸಮನ್ವಿ ಹೋಗಿರುವುದು ಕುಟುಂಬದ ಸದಸ್ಯೆಯನ್ನೇ ಕಳೆದುಕೊಂಡಂತೆ ಆಗಿದೆ ಎಂದು ದುಃಖಿತರಾದರು.
ಅಮೃತಾ ಅವರು ಗರ್ಭಿಣಿ ಆಗಿದ್ದರು. ಅವರಿಂದ ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಮಾಡಿಸುವುದು ಸರಿಯಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಕಳೆದ ವಾರ ಎಲಿಮಿನೇಟ್ ಮಾಡುವ ನಿರ್ಣಯ ತೆಗೆದುಕೊಂಡೆವು ಎಂದು ತಾರಮ್ಮ ಹೇಳಿದರು.
ಸೃಜನ್ ಸಂತಾಪ: ರಿಯಾಲಿಟಿ ಶೋನ ಪ್ರಮುಖ ಜಡ್ಜ್ ಆಗಿರುವ ನಟ, ನಿರೂಪಕ ಸೃಜನ್ ಲೋಕೇಶ್ ಅವರು ಇಂತಹ ಕರುಣಾಜನಕ ಸ್ಥಿತಿಯ ಬಗ್ಗೆ ಮನನೊಂದು ದೇವರು ಇದ್ದಾನೋ ಇಲ್ಲವೋ ಎಂಬ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೊಂದು ನುಡಿದಿದ್ದಾರೆ.
ಅಂತ್ಯಕ್ರಿಯೆ: ಅತಿ ಚಿಕ್ಕವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸಮನ್ವಿ ಅಂತ್ಯಕ್ರಿಯೆ ಮಧ್ಯಾಹ್ನ ಅಂತಿಮ ವಿ-ವಿಧಾನದೊಂದಿಗೆ ಬನಶಂಕರಿ ಚಿತಾಗಾರದಲ್ಲಿ ನೆರವೇರಿತು.

Articles You Might Like

Share This Article