ನಂದಿಬೆಟ್ಟ ರೋಪ್-ವೇ ನಿರ್ಮಾಣಕ್ಕೆ ಅನುಮೋದನೆ

Social Share

ಚಿಕ್ಕಬಳ್ಳಾಪುರ, ಫೆ 19- ಜನಪ್ರಿಯ ಪ್ರವಾಸಿ ತಾಣ ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ತಾಣವಾಗಿ ಬೆಳೆಸುವ ಉದ್ದೇಶದೊಂದಿಗೆ ರೂಪಿಸಿರುವ ರೋಪ್-ವೇ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.ನಂದಿ ಬೆಟ್ಟ ಕೆಲವೇ ವರ್ಷಗಳಲ್ಲಿ ಅತ್ಯಂತ ಆಕರ್ಷಣೀಯ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಯಾಗಲಿದೆ. ಇದು ಜಿಲ್ಲೆಯ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ ನಂದಿ ಗಿರಿಧಾಮ ಆಕರ್ಷಣೀಯ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರಿಗೆ ವಾರಾಂತ್ಯದಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಪಾರಂಪರಿಕ ಸ್ಮಾರಕ, ಕೋಟೆ, ಮನಸ್ಸಿಗೆ ಮುದ ನೀಡುವ ಪರಿಸರದಿಂದಾಗಿ ಇದು ಪ್ರವಾಸಿಗರ ಆಕರ್ಷಣೆ ಕೇಂದ್ರಬಿಂದುವಾಗಿದೆ. ಈ ಭಾಗದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಬೇರೆ ದೇಶಗಳಿಂದಲೂ ಪ್ರವಾಸಿಗರನ್ನು ಸೆಳೆಯಬಹುದು ಎಂಬ ಅಂಶ ಗಮನಕ್ಕೆ ಬಂದಿತ್ತು.
ಈ ನಿಟ್ಟಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ DBFOT ಮಾದರಿಯಲ್ಲಿ ರೋಪ್-ವೇ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 93.40 ಕೋಟಿ ರೂ. ವೆಚ್ಚದ ಪ್ರವಾಸೋದ್ಯಮ ಇಲಾಖೆಯ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಯೋಜನೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಗಮನ ಸೆಳೆಯಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನಂದಿ ಬೆಟ್ಟದ ತಪ್ಪಲಿನಿಂದ ಸುಮಾರು 2.93 ಕಿ.ಮೀ. ಎತ್ತರದ ಬೆಟ್ಟ ಪ್ರದೇಶಕ್ಕೆ ರೋಪ್-ವೇ ನಿರ್ಮಿಸಿ ಪ್ರವಾಸಿಗರನ್ನು ಕರೆದೊಯ್ಯಲು ಉದ್ದೇಶಿಸಿದ್ದು, ಲ್ಯಾಂಡಿಂಗ್ ಸ್ಟೇಷನ್ (ಇಳಿಯುವ ಸ್ಥಳ) ಬೆಟ್ಟದ ತಳಭಾಗ ಹಾಗೂ ಮೇಲ್ಭಾಗದ ಎರಡೂ ಕಡೆ ಇರುವಂತೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಒಟ್ಟು 18 ಟವರ್‍ಗಳನ್ನು ನಿರ್ಮಿಸಲಾಗುತ್ತದೆ.
ಇದರ ಜೊತೆಗೆ ರೆಸ್ಟೋರೆಂಟï, ಕೆಫೆ, ಆಹಾರ ಮಳಿಗೆ, ಇತರೆ ಮಳಿಗೆಗಳನ್ನು ನಿರ್ಮಿಸಲು ಅವಕಾಶವಿರುತ್ತದೆ. ರೋಪ್-ವೇನಲ್ಲಿ 50 ಕ್ಯಾಬಿನ್ ಗಳಿರಲಿದ್ದು, ಪ್ರತಿಯೊಂದರಲ್ಲೂ 10 ಮಂದಿ ಪ್ರಯಾಣಿಸಬಹುದು. ಒಟ್ಟು 28 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ಸಚಿವರು ವಿವರಿಸಿದ್ದಾರೆ.
ಈ ಯೋಜನೆಯಿಂದಾಗಿ ಚಿಕ್ಕಬಳ್ಳಾಪುರದ ಇತಿಹಾಸ, ಪರಂಪರೆ, ನಿಸರ್ಗ ರಮಣೀಯತೆ ಹೊರಜಗತ್ತಿಗೆ ತಿಳಿದುಬರಲಿದೆ. ಹೆಚ್ಚು ಪ್ರವಾಸಿಗರು ಬರುವುದರಿಂದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಿ, ಸ್ಥಳೀಯ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನದ ಸಮಯದಲ್ಲಿ ಹೆಚ್ಚು ಜನರು ಖಾಸಗಿ ವಾಹನಗಳಲ್ಲಿ ಬಂದು ಬೆಟ್ಟಕ್ಕೆ ತೆರಳುತ್ತಾರೆ.
ರೋಪ್-ವೇ ನಿಂದಾಗಿ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಯಾಗುವುದರೊಂದಿಗೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಜೊತೆಗೆ ಜನಜಂಗುಳಿಯನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು. ರೋಪ್ -ವೇ ನಲ್ಲಿನ ಸಂಚಾರದ ವೇಳೆ ಪ್ರವಾಸಿಗರು ವಿಹಂಗಮ ನೋಟವನ್ನೂ ಕಣ್ತುಂಬಿಕೊಳ್ಳಬಹುದು. ಈ ಯೋಜನೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೂ ಉತ್ತಮ ಹೆಸರು ಬರಲಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

Articles You Might Like

Share This Article