ಬೆಂಗಳೂರು,ಜ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಮೇಕೆದಾಟು ಅಣೆಕಟ್ಟು ಯೋಜನೆಗೆ ಡಿಪಿಆರ್ ತಯಾರಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದಾರೆ. ಅನುಮೋದನೆ ಸಿಕ್ಕ ಕೂಡಲೇ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಲಾಭ ಬಿಜೆಪಿಗೆ ಆಗಲಿದೆ ಎಂಬ ದುರುದ್ದೇಶದಿಂದ ಡಿ.ಕೆ ಶಿ.ವಕುಮಾರ್ ಬಿಟ್ಟಿ ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಮನಗರ ಜಿಲ್ಲಾ ಭಾರತೀಯ ಜನತಾ ಪಕ್ಷ ಉಪಾಧ್ಯಕ್ಷರಾದ ನಂದಿನಿ ಗೌಡ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಡಾ.ನಂಜುಂಡಪ್ಪ ಅವರ ವರದಿಯಂತೆ, ಕನಕಪುರ ತಾಲ್ಲೂಕು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಆ ವರದಿಯಂತೆ ತಾಲೂಕಿನ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಬಹುದಿತ್ತು. ಆದರೆ, ಏಕೆ ಮಾಡಲಿಲ್ಲ? ಈ ಹಿಂದೆ ಇವರು ಜಲಸಂಪನ್ಮೂಲ ಸಚಿವರು ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರು .
ಆಗ ಮೇಕೆದಾಟು ಯೋಜನೆ ಮಾಡಬಹುದಿತ್ತು. ಆಗ ತೋರದ ಆಸಕ್ತಿ ಈಗ ರಾಜಕೀಯಕ್ಕಾಗಿ ಪಾದಯಾತ್ರೆ ನಾಟಕವಾಡುತ್ತಿದ್ದಾರೆ ಎಂದು ದೂರಿದರು. ಇವರ ಹೋರಾಟಕ್ಕೆ ರೈತರಿಂದಲೇ ಬೆಂಬಲ ಸಿಗುತ್ತಿಲ್ಲ. ತಾಲೂಕಿನ ಜನತೆಯ ಮೇಲೆ ಇವರಿಗೆ ಕಾಳಜಿ ಇಲ್ಲ.
ಹಾರೋಬಲೆ ಜಲಾಶಯ ಇನ್ನು ಪೂರ್ಣವಾಗದೆ ರೈತರ ಜಮೀನುಗಳಿಗೆ ನೀರು ಹರಿಯಲಿಲ್ಲ, ಇದಕ್ಕೆ ಕಾರಣ ಡಿಕೆಶಿ. ಇಡಿ ಸಂಸ್ಥೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧನ ಮಾಡಿದಾಗ ರಾಜ್ಯಾದ್ಯಂತ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಉಂಟಾಯಿತು. ಈಗ ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದರೂ ಕಾನೂನುಬಾಹಿರವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.
ಇವರಿಗೆ ಜನಸಾಮಾನ್ಯರ ಬದುಕುಗಳು ಹಸನಾಗುವುದು ಬೇಕಿಲ್ಲ. ಬದಲಾಗಿ ಭ್ರಷ್ಟ ರಾಜಕಾರಣದಿಂದ ಮತ ಪಡೆಯುವುದೇ ಇವರ ಉದ್ದೇಶ ಎಂದು ಶಿವಕುಮಾರ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದರು.
