ಬ್ರೇಕಿಂಗ್ : ನಂದಿನಿ ಹಾಲಿನ ಪರಿಷ್ಕರಣೆ, ರೈತರಿಗೆ ಬಂಪರ್

Social Share

ಬೆಂಗಳೂರು,ನ.14- ಆರ್ಥಿಕ ನಷ್ಟ ಹಾಗೂ ಪೈಪೋಟಿಯ ಸನ್ನಿವೇಶವನ್ನು ನಿರ್ವಹಿಸುವ ಸಲುವಾಗಿ ಕೆಎಂಎಫ್ ಹಾಲಿನ ದರವನ್ನು ಪರಿಷ್ಕರಣೆ ಮಾಡಿದ್ದು, ಹೆಚ್ಚಳವಾದ ಹಣವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ.

ಕೆಎಂಎಫ್ ಸೇರಿದಂತೆ ಸರ್ಕಾರಿ ಹಾಲು ಒಕ್ಕೂಟಗಳು ಪ್ರತಿ ಲೀಟರ್‍ಗೆ ಸರಾಸರಿ 3 ರೂ.ಗಳಂತೆ ಏರಿಕೆ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತಿದೆ.

ರೈತರ ಬಹುದಿನಗಳ ಬೇಡಿಕೆಯಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಏರಿಕೆ ಮಾಡಲಾಗಿದೆ.
ಇನ್ನು ಮುಂದೆ ನಂದಿನಿ ಹಾಲು ಮತ್ತು ಮೊಸರಿನ ದರವು ಪ್ರತಿ ಲೀಟರ್‍ಗೆ 3 ರೂ. ಹೆಚ್ಚಳವಾಗಲಿದೆ. ನಷ್ಟದಲ್ಲಿರುವ ಹಾಲು ಒಕ್ಕೂಟ ಮಂಡಳಿಯನ್ನು ನಿರ್ವಹಣೆ ಮಾಡಲು ದರ ಹೆಚ್ಚಳ ಮಾಡಬೇಕೆಂದು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ರಾಜ್ಯದಲ್ಲಿರುವ ಬಹುತೇಕ ಹಾಲು ಒಕ್ಕೂಟ ಮಹಾಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಿಂಗಳ ವೇತನವನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದರ ಪರಿಷ್ಕರಣೆ ಮಾಡಬೇಕೆಂದು ಮನವಿ ಸಲ್ಲಿಸಲಾಗಿತ್ತು.

ಕೆಎಂಎಫ್ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಲವು ಬಾರಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು.

ಆದರೆ ಇತ್ತೀಚೆಗೆ ರಾಜ್ಯದ ಹಲವು ಕಡೆ ರೈತರು ಪ್ರತಿಭಟನೆ ನಡೆಸಿದ್ದು, 15 ದಿನದೊಳಗೆ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದರು. ಚರ್ಮಗಂಟು ರೋಗದಿಂದ 1 ಲಕ್ಷ ಲೀಟರ್, ಅತಿವೃಷ್ಟಿಯಿಂದಾಗಿ 3 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕುಂಠಿತವಾಗಿದ್ದು, ಖಾಸಗಿ ಕಂಪನಿಗಳು ರಾಜ್ಯದಲ್ಲಿ ಹಾಲು ಸಂಗ್ರಹವಾಗಿ ನೆರೆ ರಾಜ್ಯದಲ್ಲಿ ಮಾರಾಟ ಮಾಡುತ್ತಿವೆ.

ಈ ಪೈಪೋಟಿಯಿಂದ ಆರ್ಥಿಕ ಹೊರೆಯಾಗುತ್ತಿತ್ತು. ರೈತರು ಕೂಡ ನಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಲಿನ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಹೈನುರಾಸುಗಳ ನಿರ್ವಹಣೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಶು ಆಹಾರ ಉತ್ಪಾದನಗೆ ಬಳಸುವ ಮೆಕ್ಕೆಜೋಳ, ಹಕ್ಕಿ, ತವಡು, ಇಂಡಿ, ಖನಿಜ ಪದಾರ್ಥಗಳ ಬೆಲೆ ಶೇ.30ಕ್ಕಿಂತಲೂ ಹೆಚ್ಚಾಗಿದೆ.

ಪಶು ಆಹಾರ ಉತ್ಪಾದನಗೆ ತಗಲುವ ವೆಚ್ಚ ಎರಡು ವರ್ಷದ ಹಿಂದೆ ಕೆ.ಜಿ.ಗೆ 18 ರೂ. ಇದ್ದದ್ದು, ಪ್ರಸ್ತುತ 23ಕ್ಕೆ ಏರಿಕೆಯಾಗಿದೆ. ಪ್ರತಿನಿತ್ಯ ಹಾಲು ನೀಡುತ್ತಿರುವ 10 ಲಕ್ಷ ರೈತರಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. 1ರಿಂದ 3 ಹಸುಗಳನ್ನು ಹೊಂದಿದ್ದು, ಹೈನುಗಾರಿಕೆ ಲಾಭವಾಗುತ್ತಿಲ್ಲ ಎಂದು ಹಸುಗಳನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಕೆಎಂಎಫ್ ಕಳವಳ ವ್ಯಕ್ತಪಡಿಸಿದೆ.

ಹೆಚ್ಚಳ ಮಾಡಿರುವ ಮೊತ್ತವನ್ನ ಅತಿವೃಷ್ಟಿ ಮತ್ತು ಚರ್ಮದಂಟು ರೋಗದ ಸಮಸ್ಯೆಯಿಂದ ಸಮಸ್ಯೆಗೊಳಗಾಗಿರುವ ರೈತರಿಗೆ ಸಹಾಯಹಸ್ತ ನೀಡಲು ತೀರ್ಮಾನಿಸಲಾಗಿದೆ ಎಂದು ಕೆಎಂಎಫ್ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ದರ ಪರಿಷ್ಕರಣೆ ಹಳೆ ದರ ಹೊಸ ದರ
ಟೋನ್ಡ್ ಹಾಲು 37 40
ಹೋಮಜೈನ್ಡ್ ಟೋನ್ಡ್ ಹಾಲು 38 41
ಹೋಮಜೈನ್ಡ್ ಹಸುವಿನ ಹಾಲು 42 45
ಸ್ಪೆಷಲ್ ಹಾಲು 43 46
ಶುಭಂ ಹಾಲು 43 46
ಹೋಮಜೈನ್ಡ್ ಸ್ಟಾಂಡೈಸ್ಡರ್ ಹಾಲು 44 47
ಸಮೃದ್ದಿ ಹಾಲು 48 51
ಸಂತೃಪ್ತಿ ಹಾಲು 50 53
ಡಬಲ್ ಟೋನ್ಡ್ ಹಾಲು 36 39
ಮೊಸರು ಪ್ರತಿ ಕೆ.ಜಿಗೆ 45 48

Articles You Might Like

Share This Article