ನಂಜನಗೂಡು, ಜು.16- ಕೇರಳದ ವೈನಾಡು ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾದ ಕಾರಣ ಕಬಿನಿ ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರನ್ನು ಅಕವಾಗಿ ನದಿಗೆ ಬಿಡಲಾಗಿದ್ದು, ಕಪಿಲಾ ನದಿ ಕಳೆದ ನಾಲ್ಕು ದಿನಗಳಿಂದ ತುಂಬಿ ಹರಿಯುತ್ತಿದೆ.
ಈ ನಯನ ಮನೋಹರ ದೃಶ್ಯವನ್ನು ಸಾರ್ವಜನಿಕರು ಮತ್ತು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಕಪಿಲೆಯಲ್ಲಿ ಪ್ರವಾಹ ಉಂಟಾಗಿದ್ದರೂ ಕೊರೊನಾ ಕಾರಣ ಸಾರ್ವಜನಿಕರಿಗೆ ನೋಡುವ ಭಾಗ್ಯ ಇರಲಿಲ್ಲ. ಈ ಬಾರಿ ತುಂಬಿದ ಕಪಿಲೆಯನ್ನು ಕಂಡು ಪೂಜೆ-ಪುನಸ್ಕಾರಗಳ ಜೊತೆಗೆ, ನದಿಗೆ ಮಹಿಳೆಯರು ಬಾಗಿನ ಅರ್ಪಿಸಿ ಧನ್ಯರಾಗುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.
ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಸುಮಾರು 15ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಸರ್ಕಾರದಿಂದ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಪರಿಹಾರ ವಿತರಿಸಲು ತಹಸೀಲ್ದಾರ್ ಶಿವಮೂರ್ತಿ ಕ್ರಮ ಕೈಗೊಂಡಿದ್ದಾರೆ.