“ರಾಜಕೀಯ ದ್ವೇಷಕ್ಕಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಮಾನಸಿಕ ಹಿಂಸೆ ನೀಡುವುದನ್ನು ಸಹಿಸುವುದಿಲ್ಲ”

ಬೆಂಗಳೂರು,ಸೆ.11- ಕಾನೂನಿನ ಪ್ರಕಾರ ತೆಗೆದುಕೊಳ್ಳುವ ಕ್ರಮಗಳಿಗೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ರಾಜಕೀಯ ದ್ವೇಷಕ್ಕಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಮಾನಸಿಕ ಹಿಂಸೆ ನೀಡುವುದನ್ನು ಸಹಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಎಚ್ಚರಿಕೆ ನೀಡಿದರು.

ವಿವಿಧ ಸಂಘಟನೆಗಳು ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ನೈತಿಕವಾಗಿ, ಮಾನಸಿಕವಾಗಿ ಬೆಂಬಲ ನೀಡುವ ಸಲುವಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.

ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ದ್ವೇಷ ಸಾಧಿಸುತ್ತಿದೆ. ನಮಗೆ ಕಾನೂನಿನ ಮೇಲೆ ಗೌರವವಿದೆ. ನಿಯಮಾನುಸಾರ ತೆಗೆದುಕೊಳ್ಳುವ ಯಾವುದೇ ಕ್ರಮಗಳಿಗೆ ನಮ್ಮ ವಿರೋಧವಿಲ್ಲ. ಆದರೆ ದ್ವೇಷದ ರಾಜಕಾರಣಕ್ಕೆ ನಮ್ಮ ಸಹಮತವಿಲ್ಲ ಎಂದರು.

ಒಕ್ಕಲಿಗ ಸಮುದಾಯವನ್ನು ವಿಭಜಿಸುವ, ಒಡಕು ಮೂಡಿಸುವ ಮತ್ತು ಸಮುದಾಯದ ನಾಯಕರಿಗೆ ಕಳಂಕ ತರುವ ನಿಟ್ಟಿನಲ್ಲಿ ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಯಾರೂ ಒಳಗಾಗಬಾರದು. ನಾವು ಶಾಂತಿಪ್ರಿಯರು. ನಾವು ಯಾರಿಗೂ ತೊಂದರೆ ಕೊಡುವ ಉದ್ದೇಶ ಹೊಂದಿಲ್ಲ. ಅನ್ಯಾಯವನ್ನು ಪ್ರತಿಭಟಿಸುವ ಹಕ್ಕು ನಮ್ಮದು. ಅದನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.