ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಚಿವರನ್ನು ನೇಮಕ ಮಾಡಿ : ಕರವೇ ನಾರಾಯಣಗೌಡ

ಬೆಳಗಾವಿ, ಜ.2- ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೇಮಕ ಮಾಡಿದ ರೀತಿಯಲ್ಲೇ ಕರ್ನಾಟಕ ಸರ್ಕಾರವು ಕೂಡ ಸಚಿವರನ್ನು ನೇಮಕ ಮಾಡಿ ವಿವಾದವನ್ನು ಬಗೆಹರಿಸಬೇಕೆಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಗಿದು ಹೋಗಿರುವ ಗಡಿ ವಿವಾದವನ್ನು ಜೀವಂತವಾಗಿಟ್ಟು ಶಿವಸೇನೆ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ.

ಈಗ ಅಧಿಕಾರಕ್ಕೆ ಬಂದಿರುವ ಪಕ್ಷ ಸಚಿವರನ್ನು ನೇಮಕ ಮಾಡಿದೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರವು ಕೂಡ ಪ್ರತ್ಯೇಕವಾಗಿ ಸಚಿವರನ್ನು ನೇಮಕ ಮಾಡಬೇಕೆಂದು ಹೇಳಿದರು. ಗಡಿ ಅಭಿವೃದ್ದಿ ಪ್ರಾಧಿಕಾರವನ್ನು ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕೆಂದು ನಾರಾಯಣಗೌಡರು ತಿಳಿಸಿದರು. ಶಾಸಕ ರಮೇಶ್ ಜಾರಕಿಹೊಳಿ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ನಮ್ಮಲ್ಲೇ ಈ ರೀತಿ ಗೊಂದಲಗಳನ್ನು ಉಂಟು ಮಾಡುವುದರಿಂದ ವಿವಾದಗಳು ಹೆಚ್ಚಾಗುತ್ತವೆ. ಎಲ್ಲರೂ ಒಗ್ಗಟ್ಟಾಗಿ ಕನ್ನಡಪರವಾಗಿ ಹೋರಾಟ ಮಾಡಬೇಕು. ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಗಡಿ ವಿವಾದದ ಬಗ್ಗೆ ದನಿ ಎತ್ತಬೇಕು. ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು ಬಿಜೆಪಿ ಶಾಸಕರಿದ್ದಾರೆ. ವಿವಾದಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ನಾರಾಯಣಗೌಡ ತಿಳಿಸಿದರು.