ಕಾಶ್ಮೀರದಲ್ಲಿ 3 ಉಗ್ರರ ಸೆರೆ : 50 ಕೋಟಿ ರೂ. ಮೌಲ್ಯದ ಡ್ರಗ್ಸ್, ಶಸ್ತ್ರಾಸ್ತ್ರ ವಶ..!

ಶ್ರೀನಗರ, ಜು.27-ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಜೊತೆಗೆ ಮಾದಕ ವಸ್ತುಗಳ ಕಳ್ಳಸಾಗಣೆ ದಂಧೆಯನ್ನೂ ನಡೆಸುತ್ತಿದ್ದು, ವ್ಯವಸ್ಥಿತ ಜಾಲವೊಂದರನ್ನು ಭೇದಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ.

ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗದಾರ್‍ನ ಸಧ್ನಾ ಪಾಸ್ ಬಳಿ ನಡೆಸಿದ ಮಹತ್ವದ ಜಂಟಿ ಕಾರ್ಯಾಚರಣೆಯೊಂದರಲ್ಲಿ ಮೂವರು ಉಗ್ರಗಾಮಿಗಳನ್ನು ಬಂಧಿಸಿದ್ದು, ಭಾರೀ ಪ್ರಮಾಣದ ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಧ್ನಾ ಪಾಸ್‍ನಲ್ಲಿ ಎರಡು ವಾಹನಗಳನ್ನು ಅಡ್ಡಗಟ್ಟಿ ಸುಮಾರು 50 ಕೋಟಿ ರೂ. ಮೌಲ್ಯದ 10 ಕಿಲೋ ಬ್ರೌನ್ ಷುಗರ್ ಮತ್ತು ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಕುಪ್ವಾರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀರಾಮ್ ದಿನಕರ್ ತಿಳಿಸಿದ್ದಾರೆ.

ಒಂದು ಎಕ್-47 ರೈಫಲ್, 2 ಚೀನಿ ಪಿಸ್ತೂಲ್‍ಗಳು, 4 ಪಿಸ್ತೂಲ್ ಮ್ಯಾಗಝೈನ್‍ಗಳು, 76 ಎಕೆ-47 ರೌಂಡ್‍ಗಳು, 90 ಪಿಸ್ತೂಲ್ ರೌಂಡ್‍ಗಳು ಹಾಗೂ 20 ವಿವಿಧ ರೀತಿಯ ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಾಹನಗಳಲ್ಲಿ ಅಡಗಿಸಿಟ್ಟಿದ್ದ 10 ಕೆಜಿ ಬ್ರೌನ್ ಷುಗರ್‍ನನ್ನು ಸಹ ಜಫ್ತಿ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮËಲ್ಯ ಸುಮಾರು 50 ಕೋಟಿ ರೂ.ಗಳು ಎಂದು ಪೊಲೀಸ್ ಉನ್ನತಾಧಿಕಾರಿ ವಿವರಿಸಿದ್ದಾರೆ.

ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕಣಿವೆ ಪ್ರಾಂತ್ಯದಲ್ಲಿ ನಾರ್ಕೋ-ಡ್ರಗ್ಸ್ (ಮಾದಕವಸ್ತು-ಭಯೋತ್ಪಾದನೆ) ವ್ಯವಸ್ಥಿತ ಜಾಲ ಸಕ್ರಿಯವಾಗಿರುವ ಬಗ್ಗೆ ಮತ್ತಷ್ಟು ಮಹತ್ವದ ಮಾಹಿತಿ ಲಭ್ಯವಾಗಿದ್ದು, ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ.

Sri Raghav

Admin