ಮೋದಿ ದೊಡ್ಡ ನಾಟಕಕಾರ : ಸಿದ್ದರಾಮಯ್ಯ ಆಕ್ರೋಶ

Social Share

ಬೆಂಗಳೂರು,ಆ.9- ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಾಟಕಕಾರ. ರಾಷ್ಟ್ರಧ್ವಜ, ರಾಷ್ಟ್ರ ಗೀತೆಯನ್ನು ಅವಮಾನಿಸಿದವರು ಈಗ ಹರ್ ಘರ್ ತಿರಂಗ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜವನ್ನು ಆರ್‍ಎಸ್‍ಎಸ್‍ನ ಮುಖವಾಣಿ ಆರ್ಗನೈಸರ್‍ನಲ್ಲಿ ಟೀಕಿಸಲಾಗಿತ್ತು. ಸಂಘ ಪರಿವಾರದ ನಾಯಕರಾದ ಸಾರ್ವಕರ್, ಗೋಲ್ವಾಲ್ಕರ್ ಅವರನ್ನು ವಿರೋಧಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರ, ಹಿಂದೂ ಮಹಾಸಭಾದ ಕೊಡುಗೆ ಏನೂ ಇಲ್ಲ. ಬಿಜೆಪಿಯ ಯಾವ ನಾಯಕರು ತ್ಯಾಗ, ಬಲಿದಾನವಾಗಿಲ್ಲ. ಇಂಥವರಿಂದ ನಾವು ಈಗ ರಾಷ್ಟ್ರಭಕ್ತಿ, ಧ್ವಜ ಗೌರವಗಳ ಪಾಠ ಕೇಳುವ ದುರ್ದಿನ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಕ್ಕೆ ಯಾವುದೇ ಕೊಡುಗೆ ನೀಡದ ಬಿಜೆಪಿ, ದೇಶ ಪ್ರೇಮದ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ. ದೇಶಕ್ಕೆ ಸ್ವಾತಂತ್ರ ಬಂದು ನಾವು ಇಂದು ಅದನ್ನು ಅನುಭವಿಸುತ್ತಿದ್ದೇವೆ ಎಂದರೆ ಅದು ಕಾಂಗ್ರೆಸ್‍ನ ಕೊಡುಗೆ. ಹೀಗಾಗಿ ನಾವು ದೇಶದ ಪ್ರೇಮದ ಬಗ್ಗೆ ಮಾತನಾಡುವ ನೈತಿಕತೆ ಹೊಂದಿದ್ದೇವೆ ಎಂದರು.

ಮೋದಿ ಒಬ್ಬ ನಾಟಕಕಾರ. ಜನರಲ್ಲಿ ಸುಳ್ಳು ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಅಸತ್ಯವನ್ನು ನೂರು ಬಾರಿ ಹೇಳಿ ಸತ್ಯ ಮಾಡುವ ಅವರ ಯತ್ನವನ್ನು ವಿಫಲಗೊಳಿಸಬೇಕಿದೆ. ನಾವು ಸತ್ಯವನ್ನು ನಾಲ್ಕೈದು ಬಾರಿಯಾದರೂ ಹೇಳಲೇಬೇಕು. ಜನರ ಮನೆ ಮನೆಗೆ ತೆರಳಿ ಇತಿಹಾಸವನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ತಮ್ಮ ಕಾಲೇಜು ದಿನಗಳಲ್ಲಿ ಎಬಿವಿಪಿ ವಿರುದ್ಧ ಹೋರಾಟ ಮಾಡಿದ್ದನ್ನು ನೆನೆಸಿಕೊಂಡ ಸಿದ್ದರಾಮಯ್ಯ, ಸಂಘ ಪರಿವಾರ, ಭಜರಂಗದಳ, ಹಿಂದೂ ಮಹಾಸಭಾಗಳು ಶ್ರೇಣಿಕೃತ ವ್ಯವಸ್ಥೆ ವರ್ಣಾಶ್ರಮವನ್ನು ಪ್ರತಿಪಾದಿಸುತ್ತವೆ. ವರ್ಣಾಶ್ರಮದಲ್ಲಿ ಶೋಷಣೆ, ಅಸಮಾನತೆ ಹೆಚ್ಚಾಗುತ್ತದೆ.

ಮೊದಲ ಹಂತದಲ್ಲಿರುವವರು ಹೆಚ್ಚು ಸ್ಥಾನಮಾನ, ಗೌರವ ಸಿಗಬೇಕೆಂದು ಬಯಸುತ್ತಾರೆ. ಶೂದ್ರರಿಗೆ ಸಾವಿರಾರು ವರ್ಷ ಅಕ್ಷರಗಳಿಂದ ವಂಚಿಸಲಾಗಿತ್ತು. ಬಸವಣ್ಣ ಅವರು ಬರುವವರೆಗೂ ಹೆಣ್ಣು ಮಕ್ಕಳಿಗೂ ಶಿಕ್ಷಣ ಇರಲಿಲ್ಲ ಎಂದು ಹೇಳಿದರು.
ಆ.15ರಂದು ನಡೆಯುವ ಸ್ವಾತಂತ್ರ್ಯ ನಡಿಗೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಅಗತ್ಯವಿದೆ. ಹೀಗಾಗಿ ಎಲ್ಲರೂ ತನು-ಮನ-ಧನ ಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ, ಸ್ವಾತಂತ್ರ್ಯದ ಹೆಸರಲ್ಲಿ ವ್ಯಾಪಾರ ಮಾಡುತ್ತಿದೆ. ಹರ್ ಘರ್ ತಿರಂಗ ಅಭಿಯಾನ ಘೋಷಣೆ ಮಾಡಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಇಲ್ಲದೆ ಇದ್ದರೆ ಇವರ್ಯಾರು ಶಾಸಕರು, ಸಂಸದರು, ಸಚಿವರಾಗುತ್ತಿರಲಿಲ್ಲ. ಈಗ ಧ್ವಜವನ್ನು ಮಾರಾಟ ಮಾಡಲು ನಿಂತಿದ್ದಾರೆ. 25 ರೂ. ದೊಡ್ಡದಲ್ಲ. ಧ್ವಜವನ್ನು ಮಾರಾಟ ಮಾಡುವ ಬದಲು ಜನರಿಗೆ ಉಚಿತವಾಗಿ ಹಂಚಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಇದರ ಕೊಡುಗೆಯನ್ನು ನಾವು ಜನರಿಗೆ ಹೇಳಬೇಕು. ಆ.15ರಂದು ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಬೇಕು. ಎಲ್ಲರೂ ಶ್ವೇತ ವಸ್ತ್ರಧಾರಿಗಳಾಗಿರಬೇಕು. ಸುಮಾರು ಒಂದೂವರೆ ಲಕ್ಷ ಜನ ಭಾಗವಹಿಸುವ ಸ್ವಾತಂತ್ರ್ಯ ನಡಿಗೆ ಯಶಸ್ಸಿಗಾಗಿ ಹಲವು ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Articles You Might Like

Share This Article