ಸಿಡಿ ಕೇಸ್ : ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟ ನರೇಶ್ ಗೌಡ ಹೇಳಿದ್ದೇನು..?
ಬೆಂಗಳೂರು,ಮಾ.18- ಮಾಜಿ ಸಚಿವರೊಬ್ಬರ ಸಿ.ಡಿ ಬಿಡುಗಡೆ ಪ್ರಕರಣದಲ್ಲಿ ನನ್ನ ಪಾತ್ರ ಎಳ್ಳಷ್ಟೂ ಇಲ್ಲ. ನನ್ನ ಹೆಸರನ್ನು ತಳಕು ಹಾಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿಯೇ ನಾನು ತನಿಖಾಧಿಕಾರಿ ಮುಂದೆ ಹಾಜರಾಗಿಲ್ಲ ಎಂದು ಪ್ರಕರಣದ ಕಿಂಗ್ಪಿನ್ ಎನ್ನಲಾದ ನರೇಶ್ಗೌಡ ಹೇಳಿದ್ದಾರೆ. ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ನರೇಶ್ ಗೌಡ, ಇನ್ನು ಏಳೆಂಟು ದಿನಗಳ ನಂತರ ತನಿಖಾಧಿಕಾರಿ ಮುಂದೆ ಹಾಜರಾಗಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ತಕ್ಷಣಕ್ಕೆ ಬಂದರೆ ನನ್ನನ್ನು ಪ್ರಕರಣದಲ್ಲಿ ಸಿಲುಕಿಸುತ್ತಾರೆ. ಹಾಗಾಗಿ ಸದ್ಯಕ್ಕೆ ಬಂದಿಲ್ಲ. ಮುಂದೆ ತನಿಖಾಧಿಕಾರಿ ಮುಂದೆ ಹಾಜರಾಗಿ ಎಲ್ಲವನ್ನೂ ಹೇಳುತ್ತೇನೆ. ಈ ಹುನ್ನಾರದಲ್ಲಿ ನನ್ನನ್ನು ಹೇಗೆ ಬಲಿ ಹಾಕುತ್ತಾರೆ ಎಂಬುದೂ ಗೊತ್ತು. ಹಾಗಾಗಿ ನಾನು ಬಂದಿಲ್ಲ.
ಇಡೀ ಪ್ರಕರಣದಲ್ಲಿ ವ್ಯವಸ್ಥಿತವಾಗಿ ನನ್ನನ್ನು ತಗಲಾಕುವ ಷಡ್ಯಂತ್ರವನ್ನು ಮಾಡಲಾಗಿದೆ. ಸಿ.ಡಿ ಬಿಡುಗಡೆ ಪ್ರಕರಣದಲ್ಲಿ ಎಳ್ಳಷ್ಟೂ ನನ್ನ ಪಾತ್ರವಿಲ್ಲ. ಆ ಹುಡುಗಿಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಪರಿಚಯವಿದೆ. ಮಾಜಿ ಸಚಿವರು ನನಗೆ ಅನ್ಯಾಯ ಮಾಡಿದ್ದಾರೆ ನ್ಯಾಯ ಕೊಡಿಸಿ ಎಂದು ಆ ಹುಡುಗಿ ನನ್ನನ್ನು ಕೇಳಿಕೊಂಡಿದ್ದರು.
ಅದಕ್ಕೆ ನಾನು ಬೇಕಾದ ಸಾಕ್ಷ್ಯಾಧಾರಗಳನ್ನು ಕೇಳಿದ್ದೆ. ಅಲ್ಲದೆ ನನ್ನದೇ ಆದ ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. ನನ್ನ ಮಗುವಿನ ನಾಮಕರಣವಿತ್ತು. ಆ ಸಮಯದಲ್ಲಿ ಆ ಹುಡುಗಿ ಫೋನ್ ಮಾಡಿದ್ದಳು. ಆಗ ನಾನು ನನ್ನ ಮಗುವಿನ ನಾಮಕರಣವಿದೆ ಎಂದು ಹೇಳಿದ್ದೆ. ಹಾಗಾದರೆ ನಾವು ಬರುವುದು ಬೇಡವೆ ಎಂದು ಹೇಳಿದ್ದಳು. ಬನ್ನಿ ಎಂದಿದ್ದೆ. ಆ ಹುಡುಗಿಯೂ ಬಂದಿದ್ದಳು.
ನಾಮಕರಣ ಸಮಾರಂಭಕ್ಕೆ ಕಾಂಗ್ರೆಸ್-ಜೆಡಿಎಸ್, ಬಿಜೆಪಿ ಮುಖಂಡರು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಬಂದಿದ್ದರು. ನಮ್ಮ ಊರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕು, ಭುವನಹಳ್ಳಿ ಈಗಲೂ ನಮ್ಮದು ಹಳೆಯ ಮನೆ ಸೋರುತ್ತದೆ. ಪ್ರತಿ ವರ್ಷ ಅದಕ್ಕೆ ತೇಪೆ ಹಾಕುವ ಕೆಲಸ ಮಾಡಿಸಬೇಕು.
ನಾನು ಇವರು ಹೇಳಿದ ಹಾಗೆ 5 ಕೋಟಿ 100 ಕೋಟಿ ತೆಗೆದುಕೊಂಡಿದ್ದರೆ ಹೀಗೆಲ್ಲ ಇರುತ್ತಿರಲಿಲ್ಲ. ಈ ಪ್ರಕರಣದಲ್ಲಿ ಅವರಿಂದ ಐದು ರೂ. ಪಡೆದುಕೊಂಡಿದ್ದರೂ ನೀವು ಕೊಡುವ ಶಿಕ್ಷೆಗೆ ನಾನು ಸಿದ್ದನಾಗಿರುತ್ತೇನೆ. ಒಬ್ಬ ಪತ್ರಕರ್ತನಾಗಿ ಮಹಿಳೆಗೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡಿದ್ದೇನೆ.
ನಾನು 5 ಲಕ್ಷ ಪಡೆದಿರುವ ಸಾಲಕ್ಕೆ ಈಗಲೂ ಕಂತು ಕಟ್ಟುತ್ತಿದ್ದೇನೆ. ಕ್ರೆಡಿಟ್ ಕಾರ್ಡ್ಗೆ ಹಣ ಹೊಂದಿಸಲು ಆಗದೆ ಬಡ್ಡಿ ಕಟ್ಟುತ್ತಿದ್ದೇನೆ. ಸಂಬಳ ಬರದೆ ಎರಡೆರಡು ಸಾರಿ ಚೆಕ್ಬೌನ್ಸ್ ಆಗಿದೆ. ಪರಿಸ್ಥಿತಿ ಹೀಗಿರುವಾಗ ಲಕ್ಷ ಲಕ್ಷ, ಕೋಟಿ ಕೋಟಿ ಅಂತ ಹೇಳುತ್ತಿದ್ದಾರೆ.
24 ವರ್ಷದ ಆ ಹುಡುಗಿ ಶೋಷಿತೆ. ಆಕೆಯನ್ನೇ ಅಪರಾ ತರ ಬಿಂಬಿಸಲು ಹೊರಟಿದ್ದಾರೆ. ಅಲ್ಲಿ ಮಾಡಬಾರದ ಕೆಲಸ ಮಾಡಿರುವವರು ಆ ವ್ಯಕ್ತಿ. ಆದರೆ ಇಲ್ಲಿ ಹುಡುಗಿಯನ್ನು ಅಪರಾ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಅಂತಿಮವಾಗಿ ಹೇಳುವುದೆಂದರೆ ಆ ಸಿ.ಡಿ ಹೇಗೆ ಹೊರಗೆ ಬಂತು, ಏನಾಯ್ತು ಎಂಬುದು ನನಗೆ ಯಾವ ಮಾಹಿತಿಯೂ ಇಲ್ಲ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ನಾನು ಜೀವನ ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಪತ್ರಕರ್ತನಾಗಿ ನ್ಯಾಯ ಕೊಡಿಸುವ ಹಲವು ಕೆಲಸಗಳನ್ನು ಮಾಡಿದ್ದೇನೆ.
ಕೋರಮಂಗಲದಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ಎಸಗುತ್ತಿದ್ದನ್ನು ಪತ್ತೆಹಚ್ಚಿ ಆ ಬಾಲಕಿಗೆ ನ್ಯಾಯ ಕೊಡಿಸಿದ್ದೇನೆ. ಅದೇ ರೀತಿ ಬೇರೆ ಬೇರೆ ಸ್ಟ್ರಿಂಗ್ ಆಪರೇಷನ್ ಮಾಡಿದ್ದೇನೆ ಎಂದು ನರೇಶ್ಗೌಡ ಹೇಳಿಕೊಂಡಿದ್ದಾರೆ.