ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮುನ್ನಡೆಸುವತ್ತ ಜಿ-20 : ಅಮಿತಾಭ್ ಕಾಂತ್

Social Share

ಬೆಂಗಳೂರು,ಮಾ.8- ಭಾರತವು ನಿರ್ಣಾಯಕ ಘಟ್ಟದಲ್ಲಿ ಮತ್ತು ಸೂಕ್ತ ಸಮಯದಲ್ಲಿ ʻಜಿ 20ʼ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ವಿಶ್ವದಾದ್ಯಂತದ ದೇಶಗಳು ಕಳೆದ ಮೂರು ವರ್ಷಗಳಲ್ಲಿ ಅನುಭವಿಸಿದ ಬಿಕ್ಕಟ್ಟುಗಳಿಂದ ʻಉತ್ತಮ ಪುನಶ್ಚೇತನʼಕ್ಕಾಗಿ ನೋಡುತ್ತಿವೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಿಡಿದು ಪ್ರಸ್ತುತ ಮುಂದುವರಿದಿರುವ ಹವಾಮಾನ ಬಿಕ್ಕಟ್ಟಿನವರೆಗೆ ಎಲ್ಲಾ ಬಿಕ್ಕಟ್ಟಿನ ಪರಿಣಾಮಗಳು ಯಾವಾಗಲೂ ಲಿಂಗಾಧಾರಿತವಾಗಿವೆ. ಅವುಗಳಿಗೆ ಮಹಿಳೆಯರು ಮತ್ತು ಹುಡುಗಿಯರು ಗರಿಷ್ಠ ಬೆಲೆ ತೆರುತ್ತಾರೆ, ಅವು ಅವರ ಸುರಕ್ಷತೆ, ಜೀವನೋಪಾಯ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸರ್ವ ಸಮ್ಮತ ವಿಷಯವೇ ಆಗಿದೆ.

ಭಾರತದ ʻಜಿ 20ʼ ಅಧ್ಯಕ್ಷತೆಯು ಮಹಿಳೆಯರ ಪಾತ್ರ ಮತ್ತು ಲಿಂಗ ಸಮಾನತೆಯ ಮೇಲೆ ಅಗಾಧ ಗಮನವನ್ನು ಹರಿಸುತ್ತದೆ. ಹಣಕಾಸು, ಉದ್ಯಮಶೀಲತೆಯಲ್ಲಿ ಮಹಿಳೆಯರು ತೊಡಗಲು ಹಾಗೂ ಕಾರ್ಮಿಕ ವರ್ಗದಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಇರುವ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಬೇಕಾದ ಅನಿವಾರ್ಯ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ.

ಕೌಟುಂಬಿಕ ರಂಗದಲ್ಲಿ, ಭಾರತ ಸರಕಾರವು ಮಹಿಳಾ ಸಬಲೀಕರಣವನ್ನು ತನ್ನ ‘ಆತ್ಮನಿರ್ಭರ ಭಾರತ’ ಅಭಿವೃದ್ಧಿ ಕಾರ್ಯಸೂಚಿಯ ಹೃದಯಭಾಗದಲ್ಲಿ ಇರಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ಕೈಗೊಂಡಿದೆ. ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯರ ಸಮಗ್ರ ಅಭಿವೃದ್ಧಿಯನ್ನು ಬೆಂಬಲಿಸುವ ಬದ್ಧತೆಯೊಂದಿಗೆ ಈ ಕ್ರಮ ಕೈಗೊಂಡಿದೆ.

‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯು 2014ರಿಂದ ಜನನದ ಲಿಂಗ ಅನುಪಾತದಲ್ಲಿ 16 ಅಂಶಗಳ ಸುಧಾರಣೆಗೆ ಕಾರಣವಾಗಿದೆ. ಸಣ್ಣ ಸಾಲ ಸೌಲಭ್ಯ ಒದಗಿಸುವ ʻಮುದ್ರಾʼ ಯೋಜನೆಯ ಫಲಾನುಭವಿಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಮಹಿಳೆಯರೇ ಇದ್ದಾರೆ. ಸಮಗ್ರ ಪೌಷ್ಠಿಕಾಂಶ ಬೆಂಬಲ ಕಾರ್ಯಕ್ರಮವಾದ ʻಮಿಷನ್ ಪೋಷಣ್ 2.0 ʼ, ದೇಶಾದ್ಯಂತ 1.2 ಕೋಟಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಸೇವೆ ಸಲ್ಲಿಸಿದೆ. ದುಡಿಯುವ ಮಹಿಳೆಯರ ಹಾಸ್ಟೆಲ್‌ಗಳ ಸ್ಥಾಪನೆಯಿಂದ ಹಿಡಿದು, ಮಹಿಳೆಯರಿಗಾಗಿ ವಿವಿಧ ಕೌಶಲ್ಯ-ಅಭಿವೃದ್ಧಿ ಕಾರ್ಯಕ್ರಮಗಳ ಪ್ರಾರಂಭ, ಮಹಿಳೆಯರ ಸುರಕ್ಷತೆ ಮತ್ತು ಹಿಂಸಾಚಾರದಿಂದ ಅವರಿಗೆ ಮುಕ್ತಿ ನೀಡಲು ಉಪಕ್ರಮಗಳು – ಇವೆಲ್ಲವೂ ದೇಶದ ಮಹಿಳೆಯರ ʻಸುರಕ್ಷಾʼ (ಸುರಕ್ಷತೆ), ʻಸುವಿಧಾʼ (ಅನುಕೂಲತೆ) ಮತ್ತು ʻಸ್ವಾಭಿಮಾನ್ʼ(ಸ್ವಾತಂತ್ರ್ಯ) ಅನ್ನು ಭದ್ರಪಡಿಸುವ ಭಾರತದ ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾಗಿವೆ.

ಅರ್ಥಪೂರ್ಣ ಸಮಾಜವ್ಯಾಪಿ ಪರಿವರ್ತನೆಯ ಮೇಲೆ ಪರಿಣಾಮ ಬೀರುವ ನಿಟ್ಟಿನಲ್ಲಿ ಸರಕಾರವು ಹೆಚ್ಚಿನ ರೀತಿಯಲ್ಲಿ ಮತ್ತು ನಮ್ಮ ಸಮಾಜದ ನಾಗರಿಕ ನೀತಿಗಳಿಗೆ ಅನುಗುಣವಾಗಿ ‘ನಾರಿ ಶಕ್ತಿ’ಯ ಕೇಂದ್ರಬಿಂದುವನ್ನು ಗುರುತಿಸುತ್ತಿದೆ. ಸರಳವಾಗಿ ಹೇಳುವುದಾದರೆ, ಕೇವಲ ಅಭಿವೃದ್ಧಿಯ ಫಲಾನುಭವಿಗಳಾಗಿ ಮಾತ್ರವಲ್ಲದೆ, ಬೆಳವಣಿಗೆಯ ಚಾಲಕರಾಗಿ ಮತ್ತು ಬದಲಾವಣೆಗಳ ಏಜೆಂಟರಾಗಿ ಮಹಿಳೆಯರ ಪಾತ್ರದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ.

2023ರಲ್ಲಿ ಭಾರತವು ʻಜಿ 20ʼ ಯ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ – ಇಲ್ಲಿಯವರೆಗೆ ನಿರ್ಮಾಣವಾದ ರಭಸವನ್ನು ಮುಂದುವರಿಸಲು ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಕಾರ್ಯಸೂಚಿಯನ್ನು ಮುಂದುವರಿಸಲು ನಮಗೆ ಸಮಯ ಕೂಡಿ ಬಂದಿದೆ. ಲಿಂಗತ್ವವು ಬಹುತೇಕ ಇತರ ಎಲ್ಲಾ ಅಭಿವೃದ್ಧಿ ಸಾಧ್ಯತೆಗಳ ಮೇಲೆ ಪರಿಣಾಮ ಬೀರುವ ಒಂದು ಮಹತ್ವದ ವಿಷಯವಾಗಿದೆ. ಹೀಗಾಗಿ, ʻಜಿ 20ʼ ಕಾರ್ಯಸೂಚಿ ಮತ್ತು ಅದರ ತೊಡಗಿಸಿಕೊಳ್ಳುವಿಕೆ ಗುಂಪುಗಳಾದ್ಯಂತ ಲಿಂಗ ಸಮಾನತೆಗೆ ಹೊಸ ಒತ್ತು ನೀಡುವುದನ್ನು ನಾವು ನೋಡುತ್ತೇವೆ ಎಂಬುದು ನಮ್ಮ ಆಶಯವಾಗಿದೆ.

ನಿರ್ದಿಷ್ಟವಾಗಿ, ಈ ಕೆಳಗಿನ ವಿಷಯಗಳ ಮೇಲೆ ದೃಢವಾದ ಕ್ರಮಗಳನ್ನು ಮುನ್ನಡೆಸಲು ನಾವು ಎದುರು ನೋಡುತ್ತಿದ್ದೇವೆ:
ಮೊದಲನೆಯದಾಗಿ, ಮಹಿಳೆಯರ ಡಿಜಿಟಲ್ ಮತ್ತು ಆರ್ಥಿಕ ಸೇರ್ಪಡೆಯನ್ನು ಬೆಂಬಲಿಸುವುದು. ಜಾಗತಿಕವಾಗಿ, ಸುಮಾರು ಅರ್ಧದಷ್ಟು (42%) ಮಹಿಳೆಯರು ಮತ್ತು ಹುಡುಗಿಯರು ಔಪಚಾರಿಕ ಹಣಕಾಸು ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ. ಆರ್ಥಿಕ ಸೇರ್ಪಡೆ ದರದಲ್ಲಿ ಪ್ರಗತಿಯ ಹೊರತಾಗಿಯೂ, ಲಿಂಗ ಅಂತರವು ಕಡಿಮೆಯಾಗಿಲ್ಲ ಮತ್ತು 7% ಅಂತರವು ಮುಂದುವರೆದಿದೆ.

ಡಿಜಿಟಲ್ ತಂತ್ರಜ್ಞಾನದ ಆವಿಷ್ಕಾರಗಳು, ವಿಶೇಷವಾಗಿ ಮಾಹಿತಿ ಮತ್ತು ಸಂವಹನ ಸಂಬಂಧಿತ ಆವಿಷ್ಕಾರಗಳು, ಮಹಿಳೆಯರ ಆರ್ಥಿಕ ಸಬಲೀಕರಣವನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೂ, ಡಿಜಿಟಲ್ ತಂತ್ರಜ್ಞಾನದ ಪ್ರವೇಶ ಮತ್ತು ಡಿಜಿಟಲ್ ಶಿಕ್ಷಣ ಎರಡರಲ್ಲೂ ʻಡಿಜಿಟಲ್ ಲಿಂಗ ಅಂತರʼ ಉಳಿದಿದೆ. ʻಜೆಎಎಂʼ ಅಥವಾ ʻಜನ್ ಧನ್-ಆಧಾರ್-ಮೊಬೈಲ್ʼ ವೇದಿಕೆ ಮೂಲಕ ಮಹಿಳೆಯರ ಡಿಜಿಟಲ್ ಆರ್ಥಿಕ ಸೇರ್ಪಡೆಗೆ ಭಾರತ ಆದ್ಯತೆ ನೀಡಿದೆ.

ಇದು ಗಮನಾರ್ಹ ಸಾಮಾಜಿಕ ರಕ್ಷಣಾ ಕಾರ್ಯಕ್ರಮಗಳನ್ನು ನೇರವಾಗಿ ಅವರಿಗೆ ತಲುಪಲು ಮತ್ತು ಬಲಪಡಿಸಲು ಹಾಗೂ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ʻಜಿ 20ʼ ಮೂಲಕ, ಮಹಿಳೆಯರ ಡಿಜಿಟಲ್ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಬಲಪಡಿಸಲು ನಾವು ಇದೇ ರೀತಿಯ ದೃಢವಾದ ಮಾರ್ಗಗಳತ್ತ ನೋಡಬೇಕಿದೆ.

ಎರಡನೆಯದಾಗಿ, ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರನ್ನಾಗಿ ಮಾಡಲು ಮಹಿಳೆಯರ ಸಾಮರ್ಥ್ಯವನ್ನು ಬಲಪಡಿಸುವುದು. ಮಹಿಳೆಯರ ಪ್ರವೇಶವನ್ನು ಸುಗಮಗೊಳಿಸಲು ಹಾಗೂ ಆರ್ಥಿಕತೆ ಮತ್ತು ಸಮಾಜದಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಇದು ಮುಖ್ಯವಾಗಿದೆ.

ಉದಾಹರಣೆಗೆ, ಶಿಕ್ಷಣವನ್ನು ಸಬಲೀಕರಣದ ಮೂಲಾಧಾರವೆಂದು ಸಂಪೂರ್ಣವಾಗಿ ಅಂಗೀಕರಿಸಲಾಗಿದ್ದರೂ- ಜಾಗತಿಕವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಕೇವಲ 49%, ಕೆಳ ಮಾಧ್ಯಮಿಕ ಶಿಕ್ಷಣದಲ್ಲಿ 42% ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ 24% ಲಿಂಗ ಸಮಾನತೆಯನ್ನು ಸಾಧಿಸಲಾಗಿದೆ. ಜಾಗತಿಕವಾಗಿ, ಸುಮಾರು 1.1 ಶತಕೋಟಿ ಮಹಿಳೆಯರು ಮತ್ತು ಹುಡುಗಿಯರು ಔಪಚಾರಿಕ ಹಣಕಾಸು ವ್ಯವಸ್ಥೆಯಿಂದ ಹೊರಗೆ ಉಳಿದಿದ್ದಾರೆ.

ಅವರಲ್ಲಿ ಅನೇಕರು ಡಿಜಿಟಲ್ ತಂತ್ರಜ್ಞಾನಗಳಿಗೆ ಸೀಮಿತ ಪ್ರವೇಶವನ್ನು ಹೊಂದಿದ್ದಾರೆ. ಅಂತೆಯೇ, ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿ ಮಹಿಳೆಯರು ಗಮನಾರ್ಹ ಮಟ್ಟದಲ್ಲಿ ಹೆಚ್ಚಿನ ವೇತನರಹಿತ ಆರೈಕೆ ಕೆಲಸವನ್ನು ನಿರ್ವಹಿಸುತ್ತಾರೆ. ಆದ್ದರಿಂದ, ʻಜಿ 20ʼ ಒಟ್ಟಾಗಿ ಕೆಲಸ ಮಾಡುವುದರ ಜೊತೆಗೆ ಮಹಿಳೆಯರು ಅವರ ಜೀವನ ಮತ್ತು ಕೆಲಸದಲ್ಲಿ ಎದುರಿಸುತ್ತಿರುವ ಈ ದೀರ್ಘಕಾಲೀನ ರಚನಾತ್ಮಕ ಅಡೆತಡೆಗಳನ್ನು ಪರಿಹರಿಸುವ ಬಗ್ಗೆ ಒಮ್ಮತಕ್ಕೆ ಬಂದು ಸೂಕ್ತ ಕ್ರಮಗಳಿಗಾಗಿ ಪ್ರೇರೇಪಿಸುವುದು ನಿರ್ಣಾಯಕವಾಗಿದೆ.

ಮೂರನೆಯದಾಗಿ, ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಹಂತಗಳಲ್ಲಿ ಮಹಿಳಾ ನಾಯಕತ್ವವನ್ನು ಶಕ್ತಗೊಳಿಸುವುದು. ಇಂದು, ಆಡಳಿತ ಕಚೇರಿಗಳಲ್ಲಿ 1.90 ಕೋಟಿ ಮಹಿಳೆಯರು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಆಯ್ಕೆಯಾದ 17,000ಕ್ಕೂ ಹೆಚ್ಚು ಮಹಿಳೆಯರು ಮತ್ತು ರಕ್ಷಣಾ ಪಡೆಗಳಲ್ಲಿ 10,000ಕ್ಕೂ ಹೆಚ್ಚು ಮಹಿಳೆಯರು ಭಾರತಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರ ನೇತೃತ್ವದ ಅಭಿವೃದ್ಧಿಗೆ ಇಂತಹ ವಿಧಾನವು ನಿರ್ಣಾಯಕವಾಗಿದೆ. ಇದರಿಂದ ಮಹಿಳೆಯರ ವಿಶಿಷ್ಟ ದೃಷ್ಟಿಕೋನಗಳು, ಅನುಭವಗಳು ಮತ್ತು ನಾಯಕತ್ವದ ಶೈಲಿಗಳು ಮುನ್ನೆಲೆಗೆ ಬರುವಂತೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ. ಆ ಮೂಲಕ ಇದು ಹೆಚ್ಚು ಸರ್ವಾಂಗೀಣ ಮತ್ತು ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವಿಕೆಗೆ ದಾರಿ ಮಾಡಲಿದೆ.

ಅಂತಿಮವಾಗಿ, ವಿವಿಧ ಉಪಕ್ರಮಗಳಲ್ಲಿ ಕಂಡುಬಂದ ಫಲಿತಾಂಶಗಳ ಸುಸ್ಥಿರತೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ಲಿಂಗ-ವಿಭಜಿತ ದತ್ತಾಂಶ ವ್ಯವಸ್ಥೆಗಳಿಗೆ ಆದ್ಯತೆ ನೀಡುವುದು ನಿರ್ಣಾಯಕವಾಗಿರುತ್ತದೆ. ಉದ್ದೇಶಿತ ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಲಿಂಗ ಸಮಾನತೆಯತ್ತ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಏಕೆಂದರೆ ಲಿಂಗ-ವಿಭಜಿತ ದತ್ತಾಂಶ ಸಂಗ್ರಹಣೆ ಮತ್ತು ಹಂಚಿಕೆಯಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ.

ಜಗತ್ತು ಎದುರಿಸುತ್ತಿರುವ ಪರಸ್ಪರ ಸಂಬಂಧಿತ ಬಿಕ್ಕಟ್ಟುಗಳು ನಮ್ಮ ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಹಿನ್ನೆಡೆ ಉಂಟು ಮಾಡಿದರೂ – ಭಾರತದ ʻಜಿ 20ʼ ಅಧ್ಯಕ್ಷತೆಯು ಮುಂದಿನ ಹಂತದ ಅಭಿವೃದ್ಧಿಗೆ ಕಾರ್ಯಸೂಚಿಯನ್ನು ಹೊಂದಿಸಲು ನಮಗೆ ಅವಕಾಶ ನೀಡುತ್ತದೆ. ಅವಕಾಶಗಳನ್ನು ಬಳಸಿಕೊಂಡು, ಉತ್ತಮ ನಾಳೆಯನ್ನು ಸಾಧಿಸಲು ನಾವು ಮಹಿಳೆಯರನ್ನು ನಮ್ಮ ಪ್ರಯತ್ನಗಳ ಹೃದಯಭಾಗದಲ್ಲಿ ಇರಿಸುವುದು ನಿರ್ಣಾಯಕವಾಗಿದೆ.

ಲೇಖಕರು ʻಜಿ 20ʼ ಶೆರ್ಪಾ ಮತ್ತು ಭಾರತ ಸರಕಾರದ ನೀತಿ ಆಯೋಗದ ಮಾಜಿ ಸಿಇಒ. ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯಕ್ತಿಕವಾದವು.

G20, women, development, amitabh kant,

‘Nari shakti’ offers G20 nations a women’s empowerment mode

Articles You Might Like

Share This Article