ಭೂಪಾಲ್, ಸೆ.4- ಹಿರಿಯ ಚಿತ್ರನಟಿ ಶಬನಾ ಅಜ್ಮಿ, ಆಕೆಯ ಪತಿ ಜಾವೆದ್ ಅಖ್ತರ್ ಹಾಗೂ ನಟ ನಾಸಿರುದ್ದೀನ್ ಷಾ ಅವರು ತುಕ್ಡೆ ತುಕ್ಡೆ ಗ್ಯಾಂಗ್‍ನ ಸ್ಲೀಪರ್ ಸೆಲ್‍ಗಳೆಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರ ವಾಗ್ದಾಳಿ ನಡೆಸಿದ್ದಾರೆ.
ಬಿಲ್ಕೀಸ್ ಭಾನು ಅತ್ಯಾಚಾರ ಪ್ರಕರಣದ 11 ಆರೋಪಿಗಳನ್ನು ದೋಷಮುಕ್ತಗೊಳಿಸಿರುವುದಕ್ಕೆ ಮಾಧ್ಯಮವೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಶಬನಾ ಅಜ್ಮಿ ಮತ್ತಿತರರ ವಿರುದ್ಧ ಮಿಶ್ರಾ ಕಿಡಿಕಾರಿದ್ದಾರೆ.
ಶಬನಾ ಅಜ್ಮಿ, ಜಾವೇದ್ ಅಖ್ತರ್ ಹಾಗೂ ನಾಸಿರುದ್ದೀನ್ ಷಾ ಅವರಂತಹ ಜನರು ತುಕ್ಡೆ ಗ್ಯಾಂಗ್‍ನ ಸ್ಲೀಪರ್ ಸೆಲ್‍ಗಳಾಗಿದ್ದಾರೆ. ಕೆಲ ದಿನಗಳ ಹಿಂದೆ ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ನಯ್ಯಲಾಲ್ ಎಂಬಾತನನ್ನು ಕೆಲವರು ಭೀಕರವಾಗಿ ಹತ್ಯೆ ಮಾಡಿದ್ದಾಗ ಈ ಗ್ಯಾಂಗ್‍ನವರು ಎಲ್ಲಿ ಹೋಗಿದ್ದರು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಬೇರೆ ಬೇರೆ ರಾಜ್ಯಗಳಲ್ಲಿ ಹಲವಾರು ಭೀಕರ ಕೃತ್ಯಗಳು ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತುಕೊಳ್ಳುವ ಈ ತುಕ್ಡೆ ಗ್ಯಾಂಗ್‍ನವರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಮಾತ್ರ ತುಟಿ ಬಿಚ್ಚುವ ಮೂಲಕ ತಮ್ಮ ನಿಜಬಣ್ಣ ಬಯಲು ಮಾಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.