ದಾಬಸ್‍ಪೇಟೆ ಆರೋಗ್ಯ ಕೇಂದ್ರದಲ್ಲಿ ನರ್ಸೆ ಡಾಕ್ಟರ್..!

Spread the love

ದಾಬಸ್‍ಪೇಟೆ, ನ.19- ಇದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ. ಆದರೆ ವೈದ್ಯರೇ ಇರೋಲ್ಲ. ಇಲ್ಲಿರುವ ನಸ್ರ್ಸೇ ಹೆರಿಗೆ ಮಾಡಿಸುತ್ತಾರೆ. ಅವರ ಈ ಕಾರ್ಯಕ್ಕೆ ಡಿ ಗ್ರೂಪ್ ಸಹಾಯಕರು ಇರೋಲ್ಲ. ಗರ್ಭಿಣಿಯ ಸಂಬಂಧಿಕರೇ ಸಹಾಯಕ್ಕೆ ಧಾವಿಸಬೇಕು. ನೆಲಮಂಗಲ ತಾಲ್ಲೂಕಿನ ದಾಬಸ್‍ಪೇಟೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂತಹ ದುಃಸ್ಥಿತಿ ಬಂದಿದೆ.

ನಿನ್ನೆ ರಾತ್ರಿ ಲಕ್ಷ್ಮಿ ಎಂಬ ಮಹಿಳೆ ಹೆರಿಗೆಗಾಗಿ ಈ ಆಸ್ಪತ್ರೆಗೆ ದಾಖಲಾದರು. ಆ ಸಮಯದಲ್ಲಿ ಇದ್ದುದ್ದು ನರ್ಸ್ ಕಾಂತಮ್ಮ ಮಾತ್ರ.ತುಂಬು ಗರ್ಭಿಣಿ ಲಕ್ಷ್ಮಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಸಹಾಯಕರಿಲ್ಲದೆ ಕಾಂತಮ್ಮ ಅವರೇ ಲಕ್ಷ್ಮಿ ಅವರ ಸಂಬಂಧಿಕರ ನೆರವು ಪಡೆದು ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಡೀ ಆರೋಗ್ಯ ಕೇಂದ್ರದಲ್ಲಿ ನಾನೊಬ್ಬಳೇ ಕೆಲಸ ಮಾಡುತ್ತಿರುವುದು. ನೆರವಿಗೂ ಯಾರೂ ಇಲ್ಲ. ನನ್ನ ಕಷ್ಟ ಯಾರ ಹತ್ತಿರ ಹೇಳಿಕೊಳ್ಳೋದು ಎನ್ನುವುದು ಕಾಂತಮ್ಮ ಅವರ ಅಳಲು.
ರಾಷ್ಟ್ರೀಯ ಹೆದ್ದಾರಿ ಹಾಗೂ ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ನಮ್ಮ ಆರೋಗ್ಯ ಕೇಂದ್ರ ಸಮೀಪವೇ ಇರುವುದರಿಂದ ಪ್ರತಿ ನಿತ್ಯ ಹಲವಾರು ರೋಗಿಗಳು ಬರುತ್ತಾರೆ.ಅಪಘಾತ ಪ್ರಕರಣಗಳು ಬರುತ್ತದೆ. ಕೆಲವರು ಮದ್ಯಪಾನ ಮಾಡಿಕೊಂಡು ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದರ ಜತೆಗೆ ರಾತ್ರಿ ವೇಳೆ ಕಳ್ಳಕಾಕರ ಭಯವಿದೆ ಎನ್ನುತ್ತಾರೆ ಅವರು.

ನಮ್ಮ ಸಂಬಂಧಿಕರಾದ ಲಕ್ಷ್ಮಿ ಅವರನ್ನು ರಾತ್ರಿ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ ಇಲ್ಲಿ ಇದ್ದುದ್ದು ನರ್ಸ್ ಒಬ್ಬರೇ. ನಮ್ಮ ಜತೆ ಇದ್ದ ಮಲ್ಲಮ್ಮ ಮತ್ತು ಶಿವಮ್ಮ ಎಂಬುವರ ಸಹಾಯ ಪಡೆದು ಕಾಂತಮ್ಮ ಅವರು ಹೆರಿಗೆ ಮಾಡಿಸಿದ್ದಾರೆ ಎನ್ನುತ್ತಾರೆ ಲಕ್ಷ್ಮಿ ಸಂಬಂಧಿ ಶರಣ ಬಸಪ್ಪ. ಹೆದ್ದಾರಿ ಹಾಗೂ ಕೈಗಾರಿಕಾ ಪ್ರದೇಶದ ಸಮೀಪವೇ ಇರುವ ಈ ಆರೋಗ್ಯ ಕೇಂದ್ರಕ್ಕೆ ಪ್ರತಿ ನಿತ್ಯ ಹಲವಾರು ರೋಗಿಗಳು ಆಗಮಿಸುತ್ತಾರೆ. ಆದರೆ ವೈದ್ಯರೇ ಇಲ್ಲದ ಪರಿಣಾಮ ಬೇರೆ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಆರು ತಿಂಗಳಿನಿಂದ ಇಲ್ಲಿ ಖಾಯಂ ವೈದ್ಯರಿಲ್ಲ. ಹಾಗೊಮ್ಮೆ ಹೀಗೊಮ್ಮೆ ಎಲೆಕ್ಯಾತನಹಳ್ಳಿ, ಶಿವಗಂಗೆ ಮತ್ತಿತರ ಆಸ್ಪತ್ರೆಗಳ ವೈದ್ಯರು ಬಂದು ಹೋಗುತ್ತಾರೆ. ಇಲ್ಲದಿದ್ದರೆ ಇಲ್ಲಿಗೆ ಬರುವ ರೋಗಿಗಳನ್ನು ಆ ದೇವರೇ ಕಾಪಾಡಬೇಕು.

ಈ ಆಸ್ಪತ್ರೆಗೆ ಅಕ್ಕ ಪಕ್ಕದ ಗ್ರಾಮಗಳ ವೈದ್ಯರು ಆಗಮಿಸುತ್ತಾರೆ. ಆದರೆ ಕಳೆದ ರಾತ್ರಿ ಡಿ ಗ್ರೂಪ್ ನೌಕರ ಹೇಳದೆ ಕೇಳದೆ ರಜೆ ಹಾಕಿರುವುದರಿಂದ ಇಂತಹ ಪರಿಸ್ಥಿತಿ ಎದುರಾಯಿತು. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಸಮಜಾಯಿಷಿ ನೀಡುತ್ತಾರೆ ಆರೋಗ್ಯಾಧಿಕಾರಿ ಶಶಿಕುಮಾರ್.

ದಾಬಸ್‍ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಯದಲ್ಲಿ ನರ್ಸ್ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ಡಿಎಚ್‍ಒ ಅವರನ್ನು ಸಂಪರ್ಕಿಸಿ ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಜಿ.ಪಂ ಸದಸ್ಯ ನಂಜುಂಡಪ್ಪ.

Facebook Comments