ಬೆಂಗಳೂರು, ಫೆ. 21- ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ನ್ಯಾಷನಲ್ ಲಾ ಸ್ಕೂಲ್) ಕನ್ನಡಿಗರಿಗೆ ಶೇ. 25ರಷ್ಟು ಮೀಸಲಾತಿ ಕಾನೂನುಬದ್ಧವಾಗಿ ನೀಡದಿದ್ದರೆ, ಸರ್ಕಾರ ಸೂಕ್ತ ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಸುರೇಶಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ನಿಲುವು ಈ ಬಗ್ಗೆ ಸ್ಪಷ್ಟವಾಗಿದ್ದು, ನಮ್ಮ ಮಕ್ಕಳಿಗೆ ಮೀಸಲಾತಿ ಸಿಗಬೇಕು ಎಂಬುದಕ್ಕೆ ಬದ್ಧವಾಗಿದ್ದೇವೆ. ಫೆ.24ರಂದು ಈ ಸಂಬಂಧದ ಅರ್ಜಿ ವಿಚಾರಣೆಗೆ ಬರಲಿದೆ. ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ಸಹ ನಮ್ಮ ಬೇಡಿಕೆಗೆ ಪೂರಕವಾದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಯ್ದೆ ಜಜಾರಿಯಲ್ಲಿದ್ದರೂ ಏಕೆ ಅನುಷ್ಠಾನವಾಗುತ್ತಿಲ್ಲ ಎಂದು ಪ್ರಶ್ನಿಸಲಾಗಿದೆ.
ಏ.1ರಿಂದಲೇ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
ಈ ವಿಷಯ ನ್ಯಾಯಾಲಯದ ಮುಂದೆ ಬಂದಾಗ ವಾದಿಸಲು ತುಷಾರ ಮೆಹ್ತಾ ಅವರಂತಹ ಖ್ಯಾತ ನ್ಯಾಯವಾದಿಯನ್ನು ಕರ್ನಾಟಕ ನೇಮಕ ಮಾಡಿಕೊಂಡಿದೆ. ನಮಗೆ ಕಾನೂನು ಹೋರಾಟದಲ್ಲಿ ನ್ಯಾಯ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮೀಸಲಾತಿ ಪಾಲನೆ ಮಾಡದಿದ್ದರೆ, ಕಾನೂನು ಕ್ರಮ ತೆಗೆದುಕೊಳ?ಳುವುದು ಅನಿವಾರ್ಯವಾಗಲಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವುದರಿಂದ ಏಕಾಏಕಿ ಗಂಭೀರ ಕ್ರಮಗಳನ್ನು ಕೈಗೊಳ್ಳುವುದು ಬೇಡ. ಕಾದುನೋಡೋಣ ಎಂದರು.
ನಮ್ಮ ನೆಲ, ಜಲ, ಅನುದಾನ ಕೊಟ್ಟಿದ್ದು, ನಮ್ಮ ಮಕ್ಕಳಿಗೆ ಮೀಸಲಾತಿ ಕೊಡದಿದ್ದರೆ ಹೇಗೆ. ಕರ್ನಾಟಕದಲ್ಲಿ 10 ವರ್ಷ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಶೇಕಡಾ 25ರಷ್ಟು ಮೀಸಲಾತಿ ನೀಡುವ ಕುರಿತು ನ್ಯಾಯಾಲಯ ಹೇಳುವುದನ್ನು ಗಮನಿಸೋಣ. ನಂತರ ಖಂಡಿತ ನಮ್ಮ ಮಕ್ಕಳ ಹಿತಕ್ಕಾಗಿ ಏನು ಮಾಡುವುದೆಂಬುದನ್ನು ಯೋಚಿಸೋಣ ಎಂದು ನುಡಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ಸುರೇಶ್‍ಕುಮಾರ್, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ನ್ಯಾಷನಲ್ ಲಾ ಸ್ಕೂಲ್) ಕರ್ನಾಟಕದ ವಿದ್ಯಾರ್ಥಿಗಳಿಗೆ ಕಾನೂನಿನ ಅನ್ವಯ ಮೀಸಲಾತಿ ನೀಡುತ್ತಿಲ್ಲ. ನ್ಯಾಷನಲ್ ಲಾ ಸ್ಕೂಲ್‍ನಲ್ಲಿ ಕನ್ನಡದ ಮಕ್ಕಳಿಗೆ ಶೇ. 25ರಷ್ಟು ಮೀಸಲಾತಿ ನೀಡಬೇಕು ಎಂಬ ಕಾನೂನನ್ನು ಸದನ ಮಾಡಿದೆ. ಆದರೆ, ಕಾಲೇಜಿನ ಆಡಳಿತ ಮಂಡಳಿ ಇದನ್ನು ಕಳೆದೆರಡು ವರ್ಷಗಳಿಂದ ಪಾಲಿಸುತ್ತಿಲ್ಲ.ಅನುದಾನ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.
BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ
ನಾವು ಜಾಗ ನೀಡಿ ಈ ಕಾಲೇಜು ಸ್ಥಾಪಿಸಿದ್ದೇವೆ. ಕರ್ನಾಟಕದ ಈ ಸೌಜನ್ಯಕ್ಕೆ ಪ್ರತಿಯಾಗಿ ನಮ್ಮ ಮಕ್ಕಳಿಗೇ ಸ್ಥಾನ ನೀಡುವಿಕೆಯಲ್ಲಿ ನಿಗದಿತ ಮೀಸಲಾತಿಯನ್ನು ಅನುಸರಿಸದೇ ಇದ್ದರೆ ಹೇಗೆ? ಬೇರೆ ರಾಜ್ಯಗಳಲ್ಲಿನ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಹೀಗೆಯೇ ನಡೆದುಕೊಳ್ಳುತ್ತವೆಯೇ? ಕರ್ನಾಟಕದಲ್ಲಿ ಮಾತ್ರ ಏಕೆ ಹೀಗೆ ಎಂದು ಅವರು ಪ್ರಶ್ನಿಸಿದರು.
ಈ ಸಂಸ್ಥೆಗೆ 23 ಎಕರೆ ಜಾಗ ಹಾಗೂ 22 ಕೋಟಿ ರೂಪಾಯಿ ಅನುದಾನವನ್ನು ಕರ್ನಾಟಕ ಸರ್ಕಾರ ನೀಡಿದೆ. ಈಗ ನಮ್ಮ ಮಕ್ಕಳಿಗ ಇಲ್ಲಿ ಸೀಟು ನೀಡುತ್ತಿಲ್ಲ ಎಂದು ಗುಡುಗಿದರು. ಸುರೇಶಕುಮಾರ್ ಮಾತಿಗೆ ಧ್ವನಿಗೂಡಿಸಿದ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಕರ್ನಾಟಕ ಸರ್ಕಾರದ ನಿಯಂತ್ರಣವೇ ನಮ್ಮ ಮೇಲಿಲ್ಲ ಎನ್ನುವಂತೆ ನ್ಯಾಷನಲ್ ಲಾ ಸ್ಕೂಲ್‍ನ ವರ್ತನೆಯಿದೆ ಎಂದು ಸಿಟ್ಟಿನಿಂದ ನುಡಿದರು. ಕಾಂಗ್ರೆಸ್ ಸದಸ್ಯ ಕೃಷ್ಣ ಬೈರೇಗೌಡ ಮಾತನಾಡಿ ಕಾನೂನುಬದ್ಧವಾಗಿ ಸರ್ಕಾರ ಹೆಜ್ಜೆಯಿಟ್ಟು ಕನ್ನಡದ ಮಕ್ಕಳಿಗೆ ಸೀಟು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿಷಯ ಸೂಕ್ಷ್ಮವಿದ್ದು, ಇದರ ಆಡಳಿತ ಮಂಡಳಿಗೆ ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳೇ ಅಧ್ಯಕ್ಷರಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡೋಣ ಎಂದರು. ಬಿಜೆಪಿ ಸದಸ್ಯ ಪಿ.ರಾಜೀವ್ ಕೂಡ ಪೂರಕವಾಗಿ ಸಲಹೆಗಳನ್ನು ನೀಡಿದರು.
National, Law School, Minister, Madhuswamy, Assembly,