ದೇಶದಲ್ಲಿ ಕ್ರೀಡೆ ಮತ್ತಷ್ಟು ಪ್ರಖ್ಯಾತಿ ಪಡೆಯಲಿ : ಧ್ಯಾನ್‍ಚಂದ್‍ಗೆ ಮೋದಿ ನಮನ

Social Share

ನವದೆಹಲಿ, ಆ. 29- ದೇಶದಲ್ಲಿ ಕ್ರೀಡೆಗಳು ಮತ್ತಷ್ಟು ಪ್ರಖ್ಯಾತಗೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್‍ರ ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ವರ್ಷ ದೇಶವು ಕ್ರೀಡೆಯಲ್ಲಿ ಬಲು ದೊಡ್ಡ ಸಾಧನೆ ಮಾಡಿದೆ ಎಂದು ಕ್ರೀಡಾಪಟುಗಳ ಗುಣಗಾನ ಮಾಡಿ ಧ್ಯಾನ್‍ಚಂದ್‍ಗೆ ನಮನ ಸಲ್ಲಿಸಿದರು.

1905 ಆಗಸ್ಟ್ 29 ರಂದು ಜನಿಸಿದ ಮೇಜರ್ ಧ್ಯಾನ್‍ಚಂದ್ ಅವರು ಹಾಕಿಯಲ್ಲಿ ತಮ್ಮದೇ ಆದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ, ಅವರ ಕಾಲದಲ್ಲಿ ಹಾಕಿಯು ಸರ್ವಶ್ರೇಷ್ಠ ಮಟ್ಟದಲ್ಲಿತ್ತು, ಧ್ಯಾನ್‍ಚಂದ್ ತಮ್ಮ ಹಾಕಿ ಬ್ಯಾಟ್‍ನಿಂದ ಚಮತ್ಕಾರ ಮಾಡಿ ಗೋಲುಗಳ ಸುರಿಮಳೆ ಸುರಿಸುತ್ತಿದ್ದರಲ್ಲದೆ, 1928, 1932 ಹಾಗ 1936ರಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಮೋದಿ ಗುಣಗಾನ ಮಾಡಿದರು.

ಧ್ಯಾನ್ ಚಂದ್ ಅವರು ಕ್ರೀಡಾ ಲೋಕದಲ್ಲಿ ಮಾಡಿದ ಮಹತ್ತರ ಸಾಧನೆಗಾಗಿ ಪದ್ಮಭೂಷಣ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ ಎಂದು ಮೋದಿ ತಿಳಿಸಿದರು. ಈ ಬಾರಿ ಭಾರತದ ಕ್ರೀಡಾಪಟುಗಳು ಬರ್ಮಿಂಗ್‍ಹ್ಯಾಮ್‍ನಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಭಾರತದ ಪುರುಷ ಹಾಗೂ ಮಹಿಳಾ ಹಾಕಿಪಟುಗಳು ಕೂಡ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಬೆಳಗಿದರೆ, ಮಹಿಳಾ ಕ್ರಿಕೆಟಿಗರು ಕೂಡ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ಬ್ಯಾಡ್ಮಿಂಟನ್ ಆಟಗಾರರಾದ ಲಕ್ಷ್ಯಸೇನ್, ಪಿ.ವಿ.ಸಿಂಧು ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಗಮನ ಸೆಳೆದರೆ, ಟೇಬಲ್ ಟೆನ್ನಿಸ್‍ನಲ್ಲಿ ಅಚಂತಾ ಶರತ್ ಕಮಲ್ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ ಎಂದು ಮೋದಿ ಕೊಂಡಾಡಿದರು.

ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಈ ಬಾರಿ 22 ಚಿನ್ನ, 16 ಬೆಳ್ಳಿ ಹಾಗೂ 38 ಕಂಚಿನ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ, ಕುಸ್ತಿಪಟುಗಳು ಕೂಡ ಈ ಬಾರಿ 6 ಸ್ವರ್ಣ ಪದಕ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದು ತಮ್ಮ ಸಾಮಥ್ರ್ಯವನ್ನು ತೋರಿಸಿದ್ದಾರೆ ಎಂದು ಟ್ವೀಟ್‍ನಲ್ಲಿ ಬಣ್ಣಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಕ್ರೀಡೆಗಳು ಮಹೋನ್ನತ ಸ್ಥಾನ ಪಡೆದಿದ್ದು ಇದು ಇದೇ ರೀತಿ ಮುಂದುವರೆದು ಮುಂಬರುವ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲೂ ಕೂಡ ಪದಕಗಳನ್ನು ಗೆದ್ದು ದೇಶದ ಹಿರಿಮೆ ಹೆಚ್ಚಿಸಲಿ, ಕ್ರೀಡೆಗಳ ಅಭಿವೃದ್ಧಿಗೆ ಸರ್ಕಾರದಿಂದಲೂ ಸಾಕಷ್ಟು ಯೋಜನೆಗಳನ್ನು ರೂಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Articles You Might Like

Share This Article