ಬೆಂಗಳೂರು, ಮಾ.5- ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಾವನ್ನಪ್ಪಿರುವ ನವೀನ್ ಮೃತದೇಹವನ್ನು ಪಡೆಯುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತದೇಹವನ್ನು ಪಡೆಯುವ ಕುರಿತಂತೆ ನಿಖರ ಮಾಹಿತಿಯನ್ನು ಪಡೆಯಲಾಗುತ್ತಿದೆ. ಉಕ್ರೇನ್‍ನಿಂದ ಹಲವಾರು ಕನ್ನಡಿಗರನ್ನು ಕರೆತರಲಾಗಿದೆ ಎಂದರು.
ಉಕ್ರೇನ್‍ನ ಖರಕಾಯ್, ಕೀವ್‍ನಲ್ಲಿ ಹೊರಬರಲಾರದ ಕಠಿಣ ಪರಿಸ್ಥಿತಿಯೂ ಇದೆ. ಅಲ್ಲಿ ಸಿಲುಕಿಕೊಂಡವರನ್ನು ಪತ್ತೆ ಹಚ್ಚಲು ರಾಯಭಾರಿ ಕಚೇರಿಯವರೂ ಕಾರ್ಯ ನಿರತರಾಗಿದ್ದಾರೆ. ರಷ್ಯಾದ ದಾಳಿ ಕಡಿಮೆಯಾದ ಕೂಡಲೇ ಸಿಲುಕಿಕೊಂಡಿರುವವರ ಸಂಪರ್ಕ ಸಾಧಿಸಲಾಗುವುದೆಂಬ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ನಿನ್ನೆಯೂ ಕೂಡ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಉಕ್ರೇನ್ ರಾಯಭಾರ ಕಚೇರಿಯೊಂದಿಗೂ ಈ ಸಂಬಂಧ ಮಾತನಾಡಲಾಗಿದೆ ಎಂದರು.
ಶಿಕಾರಿಪುರದಲ್ಲಿ ರೈತರ ಸಭೆಯಲ್ಲಿ ಪಾಲ್ಗೊಂಡು, ರಾಣಿಬೆನ್ನೂರಿನಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಅವರ ತಂದೆಯವರನ್ನು ಭೇಟಿಯಾಗಿ ಸರ್ಕಾರದಿಂದ ನವೀನ್ ಕುಟುಂಬಕ್ಕೆ ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಪಾದಯಾತ್ರೆ ಮಾಡಿದ್ದಕ್ಕಾಗಿ ಮೇಕೆದಾಟು ಯೋಜನೆಗೆ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ವಿಧಾನಸಭೆಯಲ್ಲೇ ತಕ್ಕ ಉತ್ತರ ನೀಡುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬೊಮ್ಮಾಯಿ ಉತ್ತರಿಸಿದರು.
