“ಗುಂಡೇಟಿನಿಂದ ಸಾಯದಿದ್ದರೂ ಊಟ ಇಲ್ಲದೆ ಸಾಯೋದಂತೂ ಗ್ಯಾರಂಟಿ”

Social Share

ಬೆಂಗಳೂರು, ಮಾ.2- ಇಲ್ಲ ಸಾರ್ ನಾವು ಜೀವಂತವಾಗಿ ಹಿಂತಿರುಗುತ್ತೇವೆ ಎಂಬ ಆಸೆಯನ್ನೇ ಬಿಟ್ಟಿದ್ದೇವೆ. ಯಾವ ಸಂದರ್ಭದಲ್ಲಾದರೂ ನಮ್ಮ ಮೇಲೆ ಶೆಲ್ ದಾಳಿ ನಡೆಯಬಹುದು. ಒಂದು ವೇಳೆ ನಾವು ಗುಂಡೇಟಿನಿಂದ ಸಾಯದಿದ್ದರೂ ಹೊಟ್ಟೆಗೆ ಊಟ ಇಲ್ಲದೆ ಸಾಯೋದಂತೂ ಗ್ಯಾರಂಟಿ.
ಇದು ನಿನ್ನೆಯಷ್ಟೆ ಉಕ್ರೇನ್‍ನಲ್ಲಿ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಸ್ನೇಹಿತ ಶ್ರೀಕಾಂತ್ ಅವರ ಆಕ್ರಂದನ. ಬೆಂಗಳೂರಿನ ಬಿಎಂಟಿಸಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಹರೀಶ್ ಅವರ ಸಹೋದರರಾಗಿರುವ ಶ್ರೀಕಾಂತ್ ದೂರದ ಉಕ್ರೇನ್‍ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾರೆ.
ಉಕ್ರೇನಿನ ಬಂಕರ್‍ನಲ್ಲಿ ಜೀವ ಕೈಯಲ್ಲಿಡಿದುಕೊಂಡು ತಮ್ಮ ಮನೆಯವರೊಂದಿಗೆ ಮಾತನಾಡಿದ ಶ್ರಿಕಾಂತ್ ಅವರು, ಅದೃಷ್ಟವಿದ್ದರೆ ಬದುಕಿ ಬರುತ್ತೇವೆ. ನನ್ನಂತೆ ಇಲ್ಲಿ ಸಿಕ್ಕಿಹಾಕಿಕೊಂಡಿರುವ ಸಾವಿರರು ಕನ್ನಡಿಗರು ಹಾಗೂ ಭಾರತೀಯರಿಗಾಗಿ ನೀವು ಅಲ್ಲಿಂದಲ್ಲೇ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನನ್ನ ಸ್ನೇಹಿತ ನವೀನ್ ಬಲಿಯಾದ ನಂತರ ನಮಗೆ ಕ್ಷಣ ಕ್ಷಣಕ್ಕೂ ಸಾವಿಗೆ ಹತ್ತಿರವಾಗುತ್ತಿದ್ದೇವೆ ಎನಿಸುತ್ತಿದೆ. ನಮ್ಮನ್ನ ರಕ್ಷಿಸೋಕೆ ಯಾರು ಬರುತ್ತಿಲ್ಲ. ಹೊರಜಗತ್ತಿನ ಸಂಪರ್ಕವೇ ಕಡಿದುಹೋಗುತ್ತಿದೆ. ಬರೀ ಶೆಲ್ ಹಾಗೂ ಬಾಂಬ್ ದಾಳಿಯ ಶಬ್ದ ಮಾತ್ರ ಕೇಳಿಸುತ್ತಿದೆ. ನಾವು ರಕ್ಷಣೆ ಪಡೆದಿರುವ ಬಂಕರ್‍ನಲ್ಲಿ ಆಹಾರ ದಾಸ್ತಾನು ಕರಗುತ್ತಿದೆ. ನಿನ್ನೆ ನಮಗಾಗಿ ಆಹಾರ ತರಲು ಹೋದ ನವೀನ್ ಶೆಲ್ ದಾಳಿಗೆ ಬಲಿಯಾದ ನಂತರ ನಾವು ನಿಂತಿರುವ ಜಗವೇ ಕುಸಿದುಬೀಳುತ್ತಿದೆ ಎಂಬ ಭಾವನೆ ನಮ್ಮಲಿದೆ.
ಇನ್ನು ಇಲ್ಲಿ ಯುದ್ಧ ಮುಗಿಯುವ ಹಾಗೆ ಕಾಣುತ್ತಿಲ್ಲ. ಕ್ಷಣ ಕ್ಷಣಕ್ಕೂ ಉಕ್ರೇನ್ ಪರಿಸ್ಥಿತಿ ಬಿಗಾಡಾಯಿಸುತ್ತಿದೆ. ರಷ್ಯನ್ನರ ಯುದ್ಧ ದಾಹ, ಉಕ್ರೇನಿನ ಬಿಗಿಧೋರಣೆಗಾಗಿ ನಮ್ಮ ಜೀವವನ್ನು ಪಣಕ್ಕಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಶ್ರೀಕಾಂತ್.
ಲೆಕ್ಕಕ್ಕೆ ಮಾತ್ರ ನವೀನ್ ಸಾವು ತೋರಿಸಲಾಗುತ್ತಿದೆ. ನನಗೆ ತಿಳಿದ ಮಟ್ಟಿಗೆ ಇನ್ನಿತರ ಹಲವಾರು ಅಮಾಯಕ ಭಾರತೀಯ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಶಂಕೆ ನಮ್ಮಲಿದೆ. ಕೆಲವು ಸಾವು-ನೋವುಗಳನ್ನು ಮುಚ್ಚಿಡಲಾಗುತ್ತಿದೆ ಎಂಬ ಗುಮಾನಿ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಇಂದು ಆಥವಾ ನಾಳೆ ಬಂಕರ್‍ನಲ್ಲಿರುವ ಆಹಾರ ದಾಸ್ತಾನು ಮುಗಿಯುವ ಸಾಧ್ಯತೆಗಳಿವೆ. ಅಷ್ಟರೊಳಗೆ ನಮನ್ನು ಕಾಪಾಡದಿದ್ದರೆ ನಮ್ಮ ಜೀವವನ್ನು ಆ ದೇವರೇ ಉಳಿಸಿಬೇಕು ಎಂದು ಗದ್ಗದಿತರಾಗುತ್ತಾರೆ ಶ್ರೀಕಾಂತ್.
ಬಂಕರ್‍ನಿಂದ ಬಚಾವಾಗಿ ನಾವು ರೈಲಿಗೆ ತೆರಳಬೇಕು. ಆದರೆ, ಹೊರ ಹೊದರೆ ಯಾವ ಕ್ಷಣದಲ್ಲಿ ನಮ್ಮ ಮೇಲೆ ಬಾಂಬ್ ಬೀಳುವುದೋ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಬಂಕರ್‍ನಲ್ಲಿರುವವರ ರಕ್ಷಣೆ ಮಾಡಿದರೂ ಮೊದಲ ಪ್ರಾಶಸ್ತ್ಯ ಉಕ್ರೇನ್ ನಾಗರೀಕರಿಗೆ ನೀಡಲಾಗುತ್ತಿದೆ. ನಂತರ ಉಳಿದವರ ರಕ್ಷಣೆ. ಹೀಗಾಗಿ ದೂರದ ದೇಶಗಳಿಂದ ಬಂದು ಇಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದೇಶಿಗರು ಪ್ರಾಣಭಯದಿಂದ ತತ್ತರಿಸಿಹೋಗಿದ್ದಾರೆ.
ನನ್ನಂತೆ ಸಾವಿರಾರು ಭಾರತೀಯರು ಬಂಕರ್‍ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಅವರಲ್ಲಿ ಎಷ್ಟು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೋ ಆ ದೇವರೆ ಬಲ್ಲ. ಎಲ್ಲಿ ನೋಡಿದರೂ ರಾಶಿ ರಾಶಿ ಹೆಣಗಳೇ. ಎಲ್ಲರ ಆರೈಕೆಯಿಂದ ಬದುಕಿ ಬಂದರೆ ಮತ್ತೆ ಸಿಗೋಣ ಇಲ್ಲದಿದ್ದರೆ, ಇದೇ ನನ್ನ ಕೊನೆಯ ಮಾತಾಗಲಿದೆ ಎಂದರು.

Articles You Might Like

Share This Article