ಬೆಂಗಳೂರು,ಡಿ.3-ಬಾಣಂತಿಯರ ಸರಣಿ ಸಾವಿಗೆ ಕಳಪೆ ಗ್ಲೂಕೋಸ್ ಕಾರಣ ಪ್ರಕರಣವು ರಾಜ್ಯಾದ್ಯಂತ ಮಿಂಚಿನ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧೀನದ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ( ಕೆಎಸ್‌ಎಂಎಸ್‌ಸಿಎಲ್) ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಿಗಮದಲ್ಲಿ ಕಂಪನಿಗಳು ಸರಬರಾಜು ಮಾಡುವ ಔಷಧಗಳನ್ನು ಪರೀಕ್ಷಿಸುವ ಎಂಪಾನೆಲ್ಡ್ ಪ್ರಯೋಗಾಲಯ ವ್ಯವಸ್ಥೆ ಇಲ್ಲ. ಇದರಿಂದಾಗಿ ಪಶ್ಚಿಮ ಬಂಗಾ ಕಂಪನಿ ಸರಬರಾಜು ಮಾಡಿದ ಐವಿ ಪ್ಲೂಯಿಡ್ಸ್ ( ಗ್ಲೂಕೋಸ್) ಪರೀಕ್ಷಿಸಿದರೆ ಇಂತಹ ಅನಹುತ ಸಂಭವಿಸುತ್ತಿರಲಿಲ್ಲ. ಜತೆಗೆ, ಅಮೂಲ್ಯ ಜೀವಗಳು ಬದುಕುಳಿಯುತ್ತಿದ್ದವು. ಬಡ ರೋಗಗಳ ಜೀವ ಉಳಿಸುವ ಔಷಧ ಸಂಗ್ರಹಿಸುವ ಸಂಸ್ಥೆಯಾಗಿರುವ ನಿಗಮವು, ಕಳಪೆ ಗುಣಮಟ್ಟದ ಔಷಧ ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಿ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ ಎಂದು ದೂರಲಾಗಿದೆ.
ಒಂದೂವರೆ ವರ್ಷದಿಂದ ನಿಗಮವು ಭ್ರಷ್ಟಾಚಾರ, ಟೆಂಡರ್ ಹಗರಣಗಳಿಂದ ಸದಾ ಸುದ್ದಿಯಲ್ಲಿದೆ. ಕಂಪನಿಯ ವಾರ್ಷಿಕ ವಹಿವಾಟು ಕೇವಲ 22 ಕೋಟಿ ರೂ.ಇದ್ದರೂ ಈ ಕಂಪನಿಗೆ ಗ್ಲೂಕೋಸ್ ಸರಬರಾಜು ಮಾಡುವುದಕ್ಕೆ ಪೂರೈಕೆ ಅದೇಶ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಟೆಂಡರ್ ನಲ್ಲಿ ಇಎಂಡಿಯನ್ನು ಬ್ಯಾಂಕ್ ಗ್ಯಾರಂಟಿ ಅಥವಾ ಆನ್ ಲೈನ್ ವರ್ಗಾವಣೆಯಾಗಿ ಸ್ವೀಕರಿಸಲಾಯಿತು. ಈ ಮೂವರು ಅಧಿಕಾರಿಗಳು ಸದ್ದಿಲ್ಲದೆ ಇ- ಪ್ರೊಕ್ಯೂರ್ಮೆಂಟ್ ಪೋರ್ಟಲ್‌ನಲ್ಲಿ ಬ್ಯಾಂಕ್ ಗ್ಯಾರಂಟಿ ಷರತ್ತು ತೆಗೆದು ಹಾಕಿದರು. ಪಶ್ಚಿಮ್ ಬಂಗಾ ಏಕೈಕ ಬಿಡ್ದಾರರಾಗಿ ಅರ್ಹತೆಗೆ ಸಹಾಯ ಮಾಡಲಾಗಿದೆ ಎಂಬ ಅನುಮಾನ ಮೂಡಿದೆ.
ಪಶ್ಚಿಮ ಬಂಗಾ ಕಂಪನಿ ಪೂರೈಸಿರುವ ಎಲ್ಲ ಗ್ಲೂಕೋಸ್ ಔಷಧಿಗಳನ್ನು ಎಂಪಾನೆಲ್ ಪ್ರಯೋಗಾಲಯದಲ್ಲಿ ಪರೀಕ್ಷಿಸಿದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ. ಒಪ್ಪಂದ ಅವಧಿ ಮುಗಿದಿರುವುದರಿಂದ ಮತ್ತು 7-8 ತಿಂಗಳಿಂದ ಎಂಪಾನೆಲ್ ಮಾಡಿದ ಪ್ರಯೋಗಾಲಯ ಇಲ್ಲದ ಕಾರಣ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿಲ್ಲ.
ಔಷಧಿಗಳ ಸಂಗ್ರಹಿಸುವ ಮುನ್ನ ಎಂಪಾನೆಲ್ ಮಾಡಿದ ಪ್ರಯೋಗಾಲಯದಲ್ಲಿ ಪರೀಕ್ಷಿಸುವುದು ನಿಗಮ ವ್‌ಯವಸ್ಥಾಪಕ (ಗುಣಮಟ್ಟ ನಿಯಂತ್ರಣ) ಮತ್ತು ವ್ಯವಸ್ಥಾಪಕ (ಔಷಧಗಳು) ಅಧಿಕಾರಿಗಳ ವೈಫಲ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಗರ್ಭಿಣಿ ಸಾವಿನ ಪ್ರಕರಣ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು, ಔಷಧ ನಿಯಂತ್ರಣ ಇಲಾಖೆಯ ಔಷಧ ನಿಯಂತ್ರಕ ಉಮೇಶ್ ಅವರನ್ನು ಅಮಾನತುಪಡಿಸಿ ಆದೇಶಿಸಿದ್ದಾರೆ. ಅದೇರೀತಿ, ಹಿಂದಿನ ಅಧಿಕಾರಿಗಳ ಮೇಲೂ ಕ್ರಮ ಅಗತ್ಯಎಂಬ ಮಾತುಗಳು ಕೇಳಿಬರುತ್ತಿದೆ.