ನೆಲಮಂಗಲ,ಜ.24- ರಾಜಧಾನಿ ಬೆಂಗಳೂರಿಗೆ ಕೂಗಳತೆಯಲ್ಲಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಹಾಲಿ ಶಾಸಕರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ, ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಜೆಡಿಎಸ್ ಪಕ್ಷ ಹಾಲಿ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ ಅವರಿಗೆ ಈಗಾಗಲೇ ಟಿಕೆಟ್ ಘೋಷಣೆ ಮಾಡಿದೆ. ಅತ್ತ ಕಾಂಗ್ರೆಸ್ನಲ್ಲಿ ಮಾಜಿ ಸಚಿವ ಆಂಜನಾಮೂರ್ತಿ ಸೇರಿದಂತೆ 11 ಮಂದಿ ಆಕಾಂಕ್ಷಿಗಳಿದ್ದಾರೆ.
ಆಡಳಿತಾರೂಢ ಬಿಜೆಪಿಯಲ್ಲಿ ಮಾಜಿ ಸಚಿವ ಎಂ.ವಿ.ನಾಗರಾಜ್ ಪ್ರಬಲ ಆಕಾಂಕ್ಷಿಯಾಗಿದ್ದು, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ನಿವೃತ್ತ ತಹಸಿಲ್ದಾರ್ ಬಿ.ಹೊಂಬಯ್ಯ ಪೈಪೋಟಿ ನೀಡುತ್ತಿದ್ದಾರೆ.
ಆರ್ಎಸ್ಎಸ್ ಪ್ರಮುಖರ ಕೃಪಾಕಟಾಕ್ಷ ತಮ್ಮ ಮೇಲೆ ಇದೆ ಎಂದು ಹೊಂಬಯ್ಯ ಹೇಳಿಕೊಳ್ಳುತ್ತಿದ್ದಾರೆ. ಅತ್ತ ನಾಗರಾಜ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಪರಮಾಪ್ತರಾಗಿದ್ದು, ಪಕ್ಷದ ಪ್ರಭಾವಿ ನಾಯಕರ ಶಿಫಾರಸ್ಸಿನ ಮೇಲೆ ಟಿಕೆಟ್ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ.
ಅತಿಹೆಚ್ಚು ಆಕಾಂಕ್ಷಿಗಳಿರುವುದು ಮತ್ತು ಗೊಂದಲಕಾರಿಯಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ. ಮಹತ್ವದ ಬೆಳವಣಿಗೆಯಲ್ಲಿ ಈ ಬಾರಿ ಕಾಂಗ್ರೆಸ್ನ ಆಕಾಂಕ್ಷಿಗಳ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯದ ಹಾಲಿ ಅಧಿಕಾರಿಯೊಬ್ಬರ ಹೆಸರು ಕೇಳಿ ಬಂದಿದೆ. ಸಾತನೂರು ಮೂಲದ ಅಖಿಲ ಭಾರತ ಸೇವೆಯ ಅಧಿಕಾರಿ ಪ್ರಸ್ತುತ ಜಾರಿ ನಿರ್ದೇಶನಾಲಯದಲ್ಲಿ ಪ್ರಮುಖ ಹುದ್ದೆಯಲ್ಲಿದ್ದು, ಸೇವೆಯಿಂದ ಸನಿವೃತ್ತಿ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯಲಿದೆ ಎಂಬ ಚರ್ಚೆಗಳಿವೆ. ಅವರ ತಂದೆ ಕೂಡ ಹಿಂದೆ ಶಾಸಕರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಳಗದಲ್ಲಿರುವ ಅಧಿಕಾರಿ ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಅಭಿಲಾಶೆ ಹೊಂದಿದ್ದಾರೆ ಎನ್ನಲಾಗಿದೆ. ಅದಕ್ಕೆ ನಾಯಕರು ಇಂಬು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ಹೊರತಾಗಿ ಮಾಜಿ ಸಚಿವ ಆಂಜನಾಮೂರ್ತಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಲುವರಾಜು, ಬೆಂಗಳೂರಿನ ಗುತ್ತಿಗೆದಾರ ಎನ್.ಶ್ರೀನಿವಾಸ್, ವಕೀಲ ಕಾರೆಹಳ್ಳಿ ವೆಂಕಟರಾಮು, ಮಹಿಳಾ ನಾಯಕಿ ಉಮಾದೇವಿ ಸೇರಿದಂತೆ ಅನೇಕರು ಟಿಕೆಟ್ ಗಿಟ್ಟಿಸಲು ಪೈಪೋಟಿ ನಡೆಸಿದ್ದಾರೆ.
ಇವರಲ್ಲಿ ಶ್ರೀನಿವಾಸ್ ಹೆಚ್ಚು ಪ್ರಭಾವಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಬ್ಲಾಕ್ ಕಾಂಗ್ರೆಸ್ನ ನಾಯಕರ ವಿಶ್ವಾಸ ಗಳಿಸಿ ತಮ್ಮ ಹೆಸರು ಚಾಲ್ತಿಗೆ ಬರುವಂತೆ ಮಾಡಿಕೊಂಡಿದ್ದಾರೆ. ಆಕಾಂಕ್ಷಿಗಳ ಮಾಹಿತಿ ಕಲೆ ಹಾಕಲು ಕೆಪಿಸಿಸಿಯಿಂದ ವಿಕ್ಷಕರು ಕ್ಷೇತ್ರಕ್ಕೆ ಆಗಮಿಸಿದರೆ ಅವರನ್ನು ಖಾಸಗಿ ಹೊಟೇಲ್ನಲ್ಲಿರಿಸಿ ಭಾರಿ ಉಪಚಾರ ಮಾಡುವ ಮೂಲಕ ಅಲ್ಲಿಯೇ ಸಭೆ ನಡೆಸುವಷ್ಟರ ಮಟ್ಟಿಗೆ ಪ್ರಭಾವಿಯಾಗಿದ್ದಾರೆ. ಉಳಿದ ಎಲ್ಲಾ ಅಭ್ಯರ್ಥಿಗಳು ಪಕ್ಷದ ಕಚೇರಿಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸ್ಥಳೀಯರಲ್ಲದ ಹಾಗೂ ಕ್ಷೇತ್ರದಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡದೇ ನೇರವಾಗಿ ನಾಯಕರ ಹಂತದಲ್ಲಿ ರಾಜಕಾರಣ ಮಾಡುತ್ತಿರುವ ಶ್ರೀನಿವಾಸ್ ವಿರುದ್ಧ ಉಳಿದ ಆಕಾಂಕ್ಷಿಗಳೆಲ್ಲಾ ಸಿಡಿಮಿಡಿಗೊಂಡಿದ್ದಾರೆ. ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಪ್ರಮುಖ ಆಕಾಂಕ್ಷಿಗಳಾಗಿರುವ ನಮ್ಮ 10 ಮಂದಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಸೋಲಾಗಲಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಜೆಡಿಎಸ್ನಿಂದ ವಲಸೆ ಬಂದು ತುಮಕೂರು ಜಿಲ್ಲೆಯ ತುರುವೆಕರೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ನ ಮಾಜಿ ಸದಸ್ಯ ಬೇಮಲ್ ಕಾಂತರಾಜು ನೆಲಮಂಗಲ ಕ್ಷೇತ್ರದಲ್ಲೂ ತಮ್ಮ ಪ್ರಾಬಲ್ಯ ನಡೆಯುತ್ತಿದೆ ಎಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಇತ್ತೀಚೆಗೆ ನೆಲಮಂಗಲ ನಗರಸಭೆಯಲ್ಲಿರುವ ಜೆಡಿಎಸ್ನ 14ನ ಸದಸ್ಯರ ಪೈಕಿ 11 ಮಂದಿಯನ್ನು ಕಾಂಗ್ರೆಸ್ಗೆ ಕರೆ ತರಲಾಗಿದೆ ಎಂದು ಘೋಷಿಸಲಾಯಿತು.
ಅವರೆಲ್ಲರನ್ನು ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಆದರೆ ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಲಾದ ಕೆಲ ಸದಸ್ಯರು ಮರಳಿ ಜೆಡಿಎಸ್ ಶಾಸಕರ ಮನೆಗೆ ಭೇಟಿ ನೀಡಿ, ತಾವು ಕಾಂಗ್ರೆಸ್ ಪರವಾಗಿಲ್ಲ. ಚುನಾವಣೆಯಲ್ಲಿ ಜೆಡಿಎಸ್ಗಾಗಿಯೇ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿರುವುದಾಗಿ ಕುತೂಹಲ ಕೆರಳಿಸಿದೆ.
ಇದು ಸಒಂದಷ್ಟು ಗೊಂದಲಗಳನ್ನು ಹುಟ್ಟು ಹಾಕಿದೆ. ಕಾಂತರಾಜು ನಡೆಸಿದ ಕಾರ್ಯಚರಣೆ ಯಶಸ್ವಿಯೋ, ವೈಪಲ್ಯವೋ ಎಂಬ ಚರ್ಚೆಗೆ ನಾಂದಿಯಾಡಿದೆ. ಕಾಂತರಾಜು ಜೊತೆ ಗುರುತಿಸಿಕೊಂಡಿರುವ ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್ ತಮಗೆ ಹಿರಿಯ ನಾಯಕರು ಆಶೀರ್ವಾದ ಮಾಡಿದ್ದಾರೆ. ಈ ಬಾರಿ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ನಡುವಿನ ಅಭ್ಯರ್ಥಿಗಳ ಪೈಪೋಟಿಗಳು ಮತ್ತೆ ಜೆಡಿಎಸ್ಗೆ ವರದಾನವಾಗಿ ಬಿಡಬಹುದೇ ಎಂಬ ಅನುಮಾನಗಳನ್ನು ಸೃಷ್ಟಿಸಿದೆ.