ಗುತ್ತಿಗೆದಾರರ-ಅಧಿಕಾರಿಗಳ ಒಳ ಒಪ್ಪಂದ, ನೆಲಮಂಗಲ ನಗರಸಭೆ ಲೂಟಿ

Social Share

ನೆಲಮಂಗಲ,ಜ.31- ಶೇ.40ರಷ್ಟು ಕಮಿಷನ್ ದಂಧೆ ಕುರಿತು ವ್ಯಾಪಕ ಟೀಕೆಗಳು ಕೇಳಿ ಬರುತ್ತಿರುವ ನಡುವೆಯೂ ಇಲ್ಲಿನ ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣವನ್ನು ಎಗ್ಗಿಲ್ಲದೆ ಲೂಟಿ ಹೊಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ದೂರು ನೀಡಿದರೂ ಗುತ್ತಿಗೆ ಅಕ್ರಮಗಳು ನಿಂತಿಲ್ಲ. ದೂರು, ಟೀಕೆ ಮತ್ತು ಆಕ್ಷೇಪಗಳ ನಡುವೆಯೂ ನಿನ್ನೆ ವರ್ಕ್ ಆಡರ್ ನೀಡುವ ಮೂಲಕ ನಗರಸಭೆಯ ಪೌರಾಯುಕ್ತರು ಅಂಧಾ ದರ್ಬಾರ್ ಅನ್ನು ಮುಂದುವರೆಸಿದ್ದಾರೆ. ನಗರಸಭೆಯ ಅತಂತ್ರ ಪರಿಸ್ಥಿತಿಯ ನಡುವೆಯೂ ವಿಧಾನಸಭೆ ಚುನಾವಣೆ ಕಾಲದಲ್ಲಿನ ಭ್ರಷ್ಟಾಚಾರಗಳು ಮುಗಿಲು ಮುಟ್ಟಿವೆ.

ನೆಲಮಂಗಲ ನಗರಸಭೆಯಲ್ಲಿ 2022-23ನೇ ಸಾಲಿಗೆ ನಗರಸಭಾ ನಿಧಿಯಿಂದ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ 31 ವಾರ್ಡ್‍ಗಳಿಗೆ 42 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಮೊದಲು ಪುರಸಭೆಯಾಗಿದ್ದ ನಗರಸಭೆಯನ್ನು 2019ರಲ್ಲಿ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಬಳಿಕ ಹೊಸದಾಗಿ ನಗರಸಭೆಯ 31 ವಾರ್ಡ್‍ಗಳಿಗೆ ಅಧಿಸೂಚನೆ ಹೊರಡಿಸಿದ್ದ ಸರ್ಕಾರ ಚುನಾವಣೆ ನಡೆಸಲು ಮುಂದಾಗಿತ್ತು. ಹೈಕೋರ್ಟ್ ಕೂಡ ಅದಕ್ಕೆ ಸಮ್ಮತಿ ನೀಡಿತ್ತು. ಪುರಸಭೆಯ ಸದಸ್ಯರು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಉನ್ನತ ನ್ಯಾಯಾಲಯದಲ್ಲಿ ಈ ಕುರಿತು ಇನ್ನೂ ಅಂತಿಮ ನಿರ್ಧಾರ ಹೊರ ಬಂದಿಲ್ಲ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕುಕ್ಕರ್ ಭಾಗ್ಯ

ನಗರ ಸ್ಥಳೀಯ ಸಂಸ್ಥೆಯ ಆಡಳಿತ ಮುಂದುವರೆಸಲು ತಾತ್ಕಾಲಿಕವಾಗಿ ಸರ್ಕಾರ ಮಧ್ಯಂತ ಸಮಿತಿಯನ್ನು ರಚನೆ ಮಾಡಿದೆ, ಸುಪ್ರೀಂಕೋರ್ಟ್ ಕೂಡ ಆ ಸಮಿತಿಗೆ ಸಮ್ಮತಿ ಸೂಚಿಸಿದೆ. ನಗರಸಭೆಗೆ ಹೊಸದಾಗಿ ಸೇರ್ಪಡೆಯಾದ ಸುತ್ತಮುತ್ತಲಿನ ನಾಲ್ಕು ಗ್ರಾಮ ಪಂಚಾಯತ್‍ಗಳಿಂದಲೂ ತಲಾ ಒಬ್ಬರನ್ನು ಮಧ್ಯಂತರ ಕೌನ್ಸಿಲ್‍ಗೆ ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ.

ಈ ಮೊದಲು ಪುರಸಭೆಯಲ್ಲಿದ್ದ 23 ಜನ ಈಗ ಸದಸ್ಯರು ಇನ್ನೂ ನಗರಸಭೆಯ ಮಟ್ಟಕ್ಕೆ ಮೇಲ್ದರ್ಜೆಗೆ ಅಪ್‍ಡೆಟ್ ಆಗಿಲ್ಲ. ಈ ಹಿಂದೆ ತಾವು ಪ್ರತಿನಿಧಿಸುತ್ತಿದ್ದ 23 ವಾರ್ಡ್‍ಗಳಿಗೆ ಸೀಮಿತವಾಗಿ ನಗರಸಭೆಯ ನಿಧಿಯಿಂದ ಕಾಮಗಾರಿ ಕ್ರಿಯಾ ಯೋಜನೆ ರೂಪಿಸಿದ್ದಾರೆ.

ಕಲ್ಪನಾ ಎಂಬುವರು ಕಾಮಗಾರಿಗಳನ್ನು ನಿಗದಿ ಮಾಡುವಾಗ ಗ್ರಾಮ ಪಂಚಾಯತ್ ನಿರ್ಲಕ್ಷ್ಯಿಸಲಾಗಿದೆ ಎಂದು ದೂರು ನೀಡಿದ್ದಾರೆ. ಇದನ್ನು ಕಡೆಗಣಿಸಿ ಒಟ್ಟು 9.89 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿತ್ತು.

ಭ್ರಷ್ಟಚಾರ ಮಾಡಲೇಬೇಕು ಎಂದು ಪೂರ್ವ ನಿರ್ಧರಿತ ವ್ಯವಸ್ಥೆ ಟೆಂಡರ್ ಷರತ್ತಿನಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದು ಎಲ್ಲೆಡೆ ನಡೆಯುವ ರೂಢಿ. ಇಲ್ಲೂ ಅದನ್ನೇ ಪೌರಾಯುಕ್ತರು ಪಾಲನೆ ಮಾಡಿದ್ದಾರೆ.

ಟೆಂಡರ್‍ದಾರರು ಸ್ಥಳೀಯವಾಗಿ ಟ್ರೆಡ್ ಲೈಸೆನ್ಸ್ ಹೊಂದಿರಬೇಕು ಮತ್ತು ತಾವು ಟೆಂಡರ್ ಸಲ್ಲಿಸುವ ಕಾಮಗಾರಿಯ ಸ್ಥಳವನ್ನು ಇಂಜಿನಿಯರ್ ಜೊತೆ ಪರಿಶೀಲನೆ ನಡೆಸಬೇಕು, ಅದರ ಫೋಟೋವನ್ನು ಅಪ್‍ಲೋಡ್ ಮಾಡಬೇಕು ಮತ್ತು ಸ್ಥಳ ಪರಿಶೀಲನೆಯನ್ನು ಪೌರಾಯುಕ್ತರು ದೃಢಿಕರಿಸಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು ಎಂಬ ವಿಚಿತ್ರ ಷರತ್ತುಗಳನ್ನು ವಿಧಿಸಲಾಗುತ್ತದೆ.

ಇದರಿಂದ ಹೊರಗಿನವರು ಟೆಂಡರ್‍ನಲ್ಲಿ ಭಾಗವಹಿಸಲು ಕಷ್ಟ ಸಾಧ್ಯವಾಗುವಂತೆ ಮಾಡಲಾಗುತ್ತದೆ. ಸ್ಥಳೀಯರಲ್ಲದವರು ಟ್ರೆಡ್ ಲೈಸೆನ್ಸ್ ಪಡೆಯುವುದು ಮತ್ತು ಇಂಜಿನಿಯರ್ ಜೊತೆ ಸ್ಥಳ ಪರಿಶೀಲನೆ ನಡೆಸುವುದು ಸುಲಭವಾಗಿರಲಿಲ್ಲ. ಹೀಗಾಗಿ ಟೆಂಡರ್‍ಗಳಿಗೆ ಪೈಪೋಟಿಯೇ ಇಲ್ಲವಾಗಿದೆ. ಅಧಿಕಾರಿ ವರ್ಗಕ್ಕೆ ಆಪ್ತವಾಗಿರುವ ಆರೇಳು ಮಂದಿ ಗುತ್ತಿಗೆದಾರರು ತಮ್ಮಲ್ಲೇ ಕೂಟ ರಚನೆ ಮಾಡಿಕೊಂಡು ಹೆಚ್ಚು ಮೊತ್ತಕ್ಕೆ ಬಿಡ್ ಸಲ್ಲಿಸಿದ್ದಾರೆ.

ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದ ಬಿಆರ್‌ಎಸ್‌, ಎಎಪಿ

ಷರತ್ತುಗಳನ್ನು ಪೂರೈಸಲು ಸಾಧ್ಯವಾಗದೆ ಹೊರಗಿನ ಗುತ್ತಿಗೆದಾರರು ವಾಪಾಸ್ ಹೋಗಿದ್ದಾರೆ. ಹೀಗಾಗಿ ಸ್ಥಳೀಯರು ತಮ್ಮಲ್ಲೇ ಹಂಚಿಕೆ ಸಂಸ್ಕøತಿ ಮೂಲಕ ಎಲ್ಲಾ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿದ್ದಾರೆ.
ಇಲ್ಲಿ ಇ-ಪ್ರಕ್ಯೂರ್‍ಮೆಂಟ್ ಮತ್ತು ಪಾರದರ್ಶಕ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ. ಆದರೂ ನಿನ್ನೆ ಅಧಿಕಾರಿಗಳು ವರ್ಕ್ ಆಡರ್ ನೀಡಿದ್ದಾರೆ.

ಮತ್ತೊಂದು ವಿಚಿತ್ರ ಎಂದರೆ ಈಗಾಗಲೇ ಮುಗಿದು ಹೋಗಿರುವ ಕೆಲಸಗಳಿಗೂ ನಿನ್ನೆ ವರ್ಕ್ ಆಡರ್ ನೀಡಲಾಗಿದೆ. ಬೆಳಗಾವಿಯ ಗುತ್ತಿಗೆದಾರರ ಸಂತೋಷ್ ಶೇ.40ರಷ್ಟು ಕಮಿಷನ್ ನೀಡಲಾಗದೆ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಪೂರ್ವಾನ್ವಯ ವರ್ಕ್ ಆರ್ಡರ್‍ಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಆ ರೀತಿ ನಿಯಮ ಬಾಹಿರ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ ಎಂದು ಘಟಾನುಘಟಿಗಳು ಸಮರ್ಥನೆ ಮಾಡಿಕೊಂಡಿದ್ದರು. ಆದರೆ ನಿನ್ನೆ ನಗರಸಭೆಯಲ್ಲಿ ನೀಡಲಾಗಿರುವ ವರ್ಕ್ ಆಡರ್‍ನಲ್ಲಿ ಬಹುತೇಕ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

ಇನ್ನೂ ಕೆಲವು ಶೇಕಡ ಅರ್ಧದಷ್ಟು ಮುಗಿದು ಹೋಗಿವೆ. ನಗರಸಭೆಯಲ್ಲಿ ಲಭ್ಯ ಇರುವುದು ಎರಡರಿಂದ ಮೂರು ಕೋಟಿ ರೂಪಾಯಿ ಮಾತ್ರ. ಆದರೆ ನಗರಸಭೆ 10 ಕೋಟಿ ರೂಪಾಯಿ ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಹೀಗಾಗಿ ಮೊದಲು ಬಂದವರಿಗೆ ಮೊದಲು ಬಿಲ್ ಪಾವತಿ ಮಾಡುವುದಾಗಿ ಅಧಿಕಾರಿಗಳು ಘೋಷಣೆ ಮಾಡಿದ್ದರು.

ಭಾರತೀಯರ ಮೇಲೆ ಖಲಿಸ್ತಾನಿ ಉಗ್ರರ ದಾಳಿಗೆ ಖಂಡನೆ

ಇದಕ್ಕಾಗಿ ಶೇ.25ರಷ್ಟು ಕಮಿಷನ್ ಕಡ್ಡಾಯ ಎಂಬ ಅಲಿಖಿತ ನಿಯಮವೂ ಜಾರಿ ಮಾಡಲಾಗಿತ್ತು. ಹೀಗಾಗಿ ಗುತ್ತಿಗೆದಾರರು ವರ್ಕ್ ಆಡರ್‍ಗಾಗಿ ಕಾಯದೆ ಕೆಲಸ ಮುಗಿಸಿದ್ದಾರೆ. ಎಲ್ಲವೂ ಕಣ್ಣೆದುರೇ ಇದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ಭ್ರಷ್ಟ ವ್ಯವಸ್ಥೆಯನ್ನು ಅವ್ಯಹತವಾಗಿ ಮುಂದುವರೆಸಿದ್ದಾರೆ.

Nelamangala, Municipal Corporation, Contractor, scam,

Articles You Might Like

Share This Article