ರಾಷ್ಟ್ರೀಯ ನೂತನ ಶಿಕ್ಷಣ ನೀತಿ ದೇಶದ ಕಲಿಕೆಯ ದಿಕ್ಕನ್ನೆ ಬದಲಿಸಲಿದೆ : ರಾಷ್ಟ್ರಪತಿ

Social Share

ನವದೆಹಲಿ, ಜ.31- ರಾಷ್ಟ್ರೀಯ ನೂತನ ಶಿಕ್ಷಣ ನೀತಿ ದೇಶದ ಕಲಿಕೆಯ ದಿಕ್ಕನ್ನೆ ಬದಲಾವಣೆ ಮಾಡಲಿದೆ ಎಂದು ಪ್ರತಿಪಾದಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕೊಂಡಾಡಿದ್ದಾರೆ. ಇಂದಿನಿಂದ ಆರಂಭವಾದ ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಸಭೆ ಮತ್ತು ಲೋಕಸಭೆಗಳನ್ನು ಉದ್ದೇಶಿಸಿ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಲವು ಸಾಧನೆಗಳನ್ನು ಪ್ರಶಂಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಮುಖವನ್ನೇ ಬದಲಾವಣೆ ಮಾಡಲಿದೆ. ಹತ್ತು ರಾಜ್ಯಗಳ 19 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾದೇಶಿಕ ಭಾಷೆಯಲ್ಲೇ ಕಲಿಕೆಯನ್ನು ಖಚಿತ ಪಡಿಸಲಾಗಿದೆ. ಈ ವರ್ಷ ಆರು ಕಾಲೇಜುಗಳು ಸ್ಥಳೀಯ ಭಾಷೆಯಲ್ಲೇ ಕಲಿಕೆ ಆರಂಭವಾಗಿದೆ. ಕಳೆದ ವರ್ಷ 4.5 ಕೋಟಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿದ್ದಾರೆ ಎಂದು ವಿವರಿಸಿದರು.
ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಆದ್ಯತೆಯಾಗಿದೆ, ಉಜ್ವಲಾ ಯೋಜನಾ ಗೃಹಿಣಿಯರಿಗೆ ನೆರವಾಗಿದ್ದರೆ, ಉದ್ಯಮ ಆರಂಭಿಸುವವರಿಗೆ ಮುದ್ರಾ ಯೋಜನೆ ಸಹಾಯ ಒದಗಿಸುತ್ತಿದೆ. 33 ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ ನೀಡಲಾಗುತ್ತಿದೆ. ಮಹಿಳೆಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪ್ರವೇಶ ಪಡೆದಿದ್ದಾರೆ, ಕಳೆದ ಜೂನ್ ನಲ್ಲಿ ಮೊದಲ ತಂಡ ತರಬೇತಿ ಮುಗಿಸಿ ಸೇವೆಗೆ ಸೇರ್ಪಡೆಯಾಗಿದೆ.
ಹಲವು ಸ್ವಸಹಾಯ ಗುಂಪುಗಳು ಸ್ವಾವಲಂಬಿಗಳಾಗಲು ಸರ್ಕಾರ ತರಬೇತಿ ನೀಡಿದೆ. ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮ ಬಹಳಷ್ಟು ಮಹಿಳೆಯರಿಗೆ ಸಹಾಯ ಮಾಡಿದೆ. ಯುವತಿಯರು ಮದುವೆ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಹೆಚ್ಚಿಸಲಾಗಿದೆ. ತ್ರಿಬಲ್ ತಲಾಖ್ ಪದ್ಧತಿಯನ್ನು ತೆಗೆದು ಹಾಕಲಾಗಿದೆ. ಪುರುಷರೊಂದಿಗೆ ಹಜ್ ಯಾತ್ರೆ ಮಾಡಬೇಕು ಎಂಬ ನಿಯಮವನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹಲವು ಮಾರ್ಗಗಳನ್ನು ಒದಗಿಸಿಕೊಡಲಾಗಿದೆ. ಕೃಷಿ ಉತ್ಪನ್ನಗಳ ದಾಸ್ತಾನು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಣ್ಣ ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, 1.80 ಲಕ್ಷ ಕುಟುಂಬಗಳಿಗೆ ಕೇಂದ್ರ ಸರ್ಕಾರ ಅನುದಾನವನ್ನು ಹಂಚಿಕೆ ಮಾಡಿದೆ. ಕೃಷಿ ಸನ್ಮಾನ್ ನಿಧಿ ಯೋಜನೆಯಡಿ 11 ಕೋಟಿ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಕೃಷಿ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಕಳೆದ ವರ್ಷ ಕೃಷಿ ಉತ್ಪನ್ನಗಳ ರಫ್ತು 3 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಹೇಳಿದರು.
ದೇಶದ ಎಲ್ಲಾ ಬಡವರಿಗೂ ಮನೆ ಹೊಂದುವ ಹಕ್ಕನ್ನು ಸರ್ಕಾರ ಖಚಿತ ಪಡಿಸಿದೆ. ಯಾರೋಬ್ಬರು ಹಸಿವಿನಿಂದ ಮಲಗಬಾರದು ಎಂಬ ಕಾರಣಕ್ಕೆ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನು 2022ರ ಮಾರ್ಚ್ ವರೆಗೂ ವಿಸ್ತರಣೆ ಮಾಡಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಇ-ಶ್ರಮ ಪೋರ್ಟಲ್ ನಲ್ಲಿ ದೇಶಾದ್ಯಂತ 23 ಕೋಟಿ ಮಂದಿ ನೋಂದಾಣಿಯಾಗಿದ್ದಾರೆ ಎಂದರು.
ದೆಹಲಿ-ಮುಂಬೈ ಎಕ್ಸಪ್ರೆಸ್ ವೇಯನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಇದು ಅತಿ ಉದ್ದದ ರಸ್ತೆಯಾಗಲಿದೆ. ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಹೊಸ ಆಯಾಮದ ಸಾರಿಗೆ ವ್ಯವಸ್ಥೆಗೆ ಭಾರತ ಮುನ್ನುಡಿ ಬರೆದಿದೆ. 2014ರ ನಂತರ ಹೆದ್ಧಾರಿ ನಿರ್ಮಾಣದಲ್ಲಿ ಬಹಳಷ್ಟು ಸಾಧನೆಗಳಾಗಿವೆ. ಹೆದ್ಧಾರಿಗಳ ಉದ್ಧ 90 ಸಾವಿರ ಕಿಲೋ ಮೀಟರ್ ನಿಂದ 1.40 ಲಕ್ಷ ಕಿಲೋ ಮೀಟರ್ ಗೆ ಹೆಚ್ಚಾಗಿದೆ.
ಪ್ರಧಾನ ಮಂತ್ರಿ ಅವರ ಮಹತ್ವಾಕಾಂಕ್ಷಿ ಯೋಜನೆ ಆತ್ಮನಿರ್ಭರ ಭಾರತ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕಾ ವಲಯಗಳಿಗೆ ಬೆನ್ನೆಲುಬಾಗಿದೆ. 13 ಲಕ್ಷ ಎಂ ಎಸ್ ಎಂ ಇ ಗಳು ಸರ್ಕಾರದ ಯೋಜನೆಗಳ ಲಾಭ ಪಡೆದಿವೆ. ಮೇಗಾ ಟೆಕ್ಸ್ ಟೈಲ್ಸ್ ಪಾರ್ಕ್ ಮೂಲಕ ಹೊಸ ಉದ್ಯೋಗಾವಕಾಶಗಳು ಹೆಚ್ಚಾಗಿವೆ. 2016ರಿಂದ 56 ಕ್ಷೇತ್ರಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ನವೋದ್ಯಮಗಳು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ.
ಕೋವಿಡ್ ಸಂಕಷ್ಟದ ನಡುವೆಯೂ 7400 ಕೋಟಿ ರುಪಾಯಿ ಹೂಡಿಕೆಯ 40 ನವೋದ್ಯಮಗಳು 2021ರಲ್ಲಿ ಮುಂಚೂಣಿಗೆ ಬಂದಿವೆ. ಈ ಮೂಲಕ ದೇಶದಲ್ಲಿ ಕೈಗಾರಿಕಾ ಸ್ಥಾಪನಾ ಸಂಸ್ಕೃತಿ ಮೇಲಿನ ವಿಶ್ವಾಸ ಹೆಚ್ಚಾಗಿದೆ. ಮೇಕ್ ಇನ್ ಇಂಡಿಯಾ ಮೂಲಕ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ. ಸರ್ಕಾರ ಹಲವು ಯೋಜನೆಗಳಿಗೆ ಅನುಮತಿ ನೀಡಿದೆ.
ನಮ್ಮ ಸೈನಿಕರು ದೇಶಿ ನಿರ್ಮಿತ ಆಯುಧಗಳನ್ನು ಪಡೆಯುತ್ತಿದ್ದಾರೆ. ದೇಶಿಯ ತೇಜಸ್ ಯುದ್ಧ ವಿಮಾನಕ್ಕೆ ಅನುಮೋದನೆ ದೊರೆತಿದೆ. ಶಸ್ತ್ರಾಸ್ತ್ರಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ನಮ್ಮ ಗುರಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಏಳು ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಕಂಪೆನಿಗಳ ಅನುಕೂಲಕ್ಕಾಗಿ ಡ್ರೋಣ್ ನಿಯಮಗಳನ್ನು ಸರಳೀಕರಣ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹೊಸ ಕಾರ್ಮಿಕ ನೀತಿ ಹಾಗೂ ಬ್ಯಾಂಕ್ ಗಳ ಸುಧಾರಣಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 28 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ 2900 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಇವರನ್ನು ಆನ್ ಲೈನ್ ಕಂಪೆನಿಗಳೊಂದಿಗೆ ಜೋಡಣೆ ಮಾಡಲಾಗಿದೆ. ಜನಧನ್ ಯೋಜನೆಯಡಿ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೋಡಣೆ ಮಾಡಲಾಗಿತ್ತು. ಕೋವಿಡ್ ಸಂಕಷ್ಟ ಸಮಯದಲ್ಲಿ ಸುಮಾರು 44 ಕೋಟಿ ಬಡವರಿಗೆ ನೇರ ನಗದು ರವಾನೆ ಮಾಡಲಾಗಿದೆ ಎಂದು ಹೇಳಿದರು.
ಜಮ್ಮು ಕಾಶ್ಮೀರದ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಜಮ್ಮುವಿನಲ್ಲಿ ಒಂದು , ಕಾಶ್ಮೀರದಲ್ಲಿ ಒಂದು ಎಐಐಎಂಎಸ್ ಸೇರಿ ಎರಡು ಉನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಏಳು ಮೆಡಿಕಲ್ ಕಾಲೇಜುಗಳು, ಜೊತೆಗೆ ಐಐಟಿ ಹಾಗೂ ಐಐಎಂ ಸಂಸ್ಥೆಗಳನ್ನು ಸ್ಥಾಫಿಸಲಾಗುತ್ತಿದೆ ಎಂದು ಹೇಳಿದರು.
ಕೋವಿಡ್ ನಂತಹ ಸಂಕಷ್ಟ ಸಮಯದಲ್ಲಿ ಸಂಸದರ ಪ್ರಾಮಾಣಿಕ ಜನಸೇವೆಯನ್ನು ಶ್ಲಾಘಿಸುವುದಾಗಿ ರಾಷ್ಟ್ರಪತಿ ಹೇಳಿದರು. ನಾಗರಿಕಾ ಸೇವೆಯಲ್ಲಿರುವವರಿಗೆ ಮತ್ತಷ್ಟು ಅವಕಾಶಗಳು ಒದಗಿ ಬರಲಿವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಔಷಧಿ ವಲಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಲಾಗಿದೆ. ಪಿ ಎಲ್ ಐ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಯೋಜನೆಗಳ ಮೂಲಕ ಆಯುರ್ವೇಧ ಮತ್ತು ದೇಶಿಯ ಚಿಕಿತ್ಸಾ ಪದ್ಧತಿಗಳ ಲಾಭವನ್ನು ಜನ ಪಡೆದುಕೊಳ್ಳುವಂತಾಗಿದೆ. ಆಯುಷ್ಮಾನ್ ಭಾರತ್ ಯೋಜನೆಗೆ 64 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಿದ್ದು, ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ದೂರಗಾಮಿ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ.
ಕೋವಿಡ್ ನಿರೋಧಕ ಲಸಿಕೆಯ ಮೊದಲ ಡೋಸ್ ಅನ್ನುದೇಶದ ಶೇ.90ರಷ್ಟು ಹಿರಿಯ ನಾಗರಿಕರು ಪಡೆದುಕೊಂಡಿದ್ದಾರೆ. ಲಸಿಕಾ ಅಭಿಯಾನದಲ್ಲಿ ಭಾರತ ವಿಶ್ವ ದಾಖಲೆ ಬರೆದಿದೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಭಾರತ ಒಂದು ತಂಡವಾಗಿ ಕೆಲಸ ಮಾಡಿದೆ ಎಂದು ಕೊಂಡಾಡಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರನ್ನು ಸರ್ಕಾರ ಗೌರವಿಸಿದೆ ಎಂದು ರಾಷ್ಟ್ರಪತಿಗಳು, ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮಪರ್ಣೆ ಮಾಡಿದರು.
ಪಶ್ಚಿಮ ಬಂಗಾಳದ ಕೊಲ್ಕಾತದ ದುರ್ಗಾ ಪೂಜೆ ಮತ್ತು ಪ್ರಯಾಗ್ ರಾಜ್ ನ ಕುಂಬ ಮೇಳವನ್ನು ವಿಶ್ವಸಂಸ್ಥೆಯ ಶಿಕ್ಷಣ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೋ) ಗುರುತಿಸಿರುವುದಕ್ಕೆ ರಾಷ್ಟ್ರಪತಿ ಹರ್ಷ ವ್ಯಕ್ತ ಪಡಿಸಿದರು. ಆಫ್ಘಾನಿಸ್ತಾನದಲ್ಲಿ ದೇವಿಶಕ್ತಿ ಪೂಜೆಯ ವೇಳೆ ಉಂಟಾದ ಸಂಘರ್ಷವನ್ನು ರಾಷ್ಟ್ರಪತಿ ಖಂಡಿಸಿದರು.

Articles You Might Like

Share This Article