20 ಸಾವಿರ ಅಂಗನವಾಡಿಗಳಲ್ಲಿ NEP ಜಾರಿ

Social Share

ಬೆಂಗಳೂರು, ಸೆ.13- ಪ್ರಸಕ್ತ ಸಾಲಿನಲ್ಲಿ ರಾಜ್ಯ 20 ಸಾವಿರ ಅಂಗನವಾಡಿಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಶಾಲಾಪೂರ್ವ ಶಿಕ್ಷಣ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆಚಾರ್ ಹಾಲಪ್ಪ ಬಸಪ್ಪ ಹೇಳಿದರು.

ವಿಧಾನ ಪರಿಷತ್‍ನಲ್ಲಿ ಜೆಡಿಎಸ್‍ನ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮಗಳನ್ನು ಜಾರಿ ಮಾಡಲಾಗುವುದು ಎಂದರು.

ನೂತನ ಶಿಕ್ಷಣ ನೀತಿಯನ್ವಯ ಶಾಲಾ ಪೂರ್ವ ಶಿಕ್ಷಣಕ್ಕೆ ಪಠ್ಯಕ್ರಮ ರೂಪಿಸಲು ಈಗಾಗಲೇ ಆರು ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿಗಳ ಶಿಫಾರಸು ಆಧರಿಸಿ ಪಠ್ಯಕ್ರಮ ಸೇರಿ ಇತರ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಸದರಿ ಪಠ್ಯ ಕ್ರಮ ಬೋಧನೆಗಾಗಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದರು.

ಈ ವರ್ಷ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ಎನ್‍ಇಪಿ ಅನುಸಾರ ಶಾಲಾ ಪೂರ್ವ ಶಿಕ್ಷಣವನ್ನು ಜಾರಿ ಮಾಡಲಾಗುವುದು. ತದನಂತರ ಅಗತ್ಯವಿದ್ದರೆ ಕಾರ್ಯಕರ್ತರಿಗೆ ಆರು ತಿಂಗಳಿನಿಂದ ಒಂದು ವರ್ಷದ ಡಿಫ್ಲೋಮಾ ತರಬೇತಿ ನೀಡಲಾಗುವುದು. ಎನ್‍ಇಪಿ ಪಠ್ಯ ಕ್ರಮ ಬೋಧನೆಗೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಸದ್ಯಕ್ಕೆ ಎನ್‍ಇಪಿ ಜಾರಿ ಮಾಡಿಲ್ಲ, ತರಬೇತಿ ಸೇರಿ ಅಗತ್ಯವಾದ ಪೂರ್ವ ತರಬೇತಿ ನಡೆಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುವುದು. ಅದಕ್ಕಾಗಿಯೇ ಸಮಿತಿ ರಚಿಸಲಾಗಿದೆ. ಕೇಂದ್ರ ಸರ್ಕಾರವೇ ಶೀಘ್ರ ಶಾಲಾಪೂರ್ವ ಶಿಕ್ಷಣವನ್ನು ಘೋಷಣೆ ಮಾಡಲಿದೆ ಎಂದರು.

ರಾಜ್ಯದ ಅಂಗನವಾಡಿಗಳ ಮೂಲ ಸೌಲಭ್ಯ ಅಭಿವೃದ್ಧಿಗೆ ಹಲವು ಯೋಜನೆಗಳ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ. ಬಜೆಟ್‍ನಲ್ಲಿ 1877 ಹೊಸ ಅಂಗನವಾಡಿ ಕಟ್ಟಡಗಳನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿ 4780 ಹೊಸ ಅಂಗನವಾಡಿಗಳನ್ನು ಘೋಷಣೆ ಮಾಡಿದ್ದಾರೆ. 48 ವರ್ಷ ಮೇಲ್ಪಟ್ಟವರ ಹಿತ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ 66,361 ಅಂಗನವಾಡಿಗಳ ಪೈಕಿ 20 ಸಾವಿರ ಅಂಗನವಾಡಿಗಳಲ್ಲಿ ಪಿಯುಸಿವರೆಗೂ ಕಲಿತವರಿದ್ದಾರೆ. ಎಸ್‍ಎಸ್‍ಎಲ್‍ಸಿ ಕಲಿತವರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದರು.

ಇದನ್ನೂ ಓದಿ : ಮತ್ತೆ ಮುನ್ನೆಲೆಗೆ ಬಂದ ಸಿದ್ದು ದುಬಾರಿ ವಾಚ್ ವಿವಾದ

ಬಿಜೆಪಿಯ ಪ್ರಾಣೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 18 ವರ್ಷದೊಳಗಿನ ಎಚ್‍ಐವಿ ಪೀಡಿತ ಮಕ್ಕಳ ಆರೈಕೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲಾ ಆಸ್ಪತ್ರೆಗಳ ಎಟಿಆರ್ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೋಂಕಿತ ಮಕ್ಕಳ ವಿಶೇಷ ಪಾಲನೆಗೆ ಮಾಸಿಕ ಒಂದು ಸಾವಿರ ರೂ. ನೀಡಲಾಗುತ್ತಿದೆ ಎಂದರು.

ಎಚ್‍ಐವಿ ಪೀಡಿತ 3102, ಭಾದಿತ 9488 ಸೇರಿ ಒಟ್ಟು 12592 ಮಕ್ಕಳಿದ್ದಾರೆ. ಪ್ರತಿವರ್ಷ ಇವರ ಹಾರೈಕೆಗೆ 15 ಕೋಟಿ ರೂ. ನೀಡಲಾಗುತ್ತಿತ್ತು. ಈ ವರ್ಷ 20 ಕೋಟಿ ರೂ. ನೀಡಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಚಿಕಿತ್ಸೆಗಾಗಿ ಅನುದಾನ ನೀಡುವ ಅಗತ್ಯ ಇಲ್ಲ ಎಂದರು.

ಬಿಜೆಪಿಯ ರವಿಕುಮಾರ್ ಅವರು, ರಾಜ್ಯದಲ್ಲಿನ ವಿಕಲಚೇತರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2021-22ನೇ ಸಾಲಿನ ಹಣಕಾಸು ವರ್ಷದ ಕ್ರಿಯಾ ಯೋಜನೆಯಡಿ ಯಂತ್ರಚಾಲಿತ ದ್ವಿಚಕ್ರ, ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್, ಟಾಕಿಂಗ್ ಮೊಬೈಲ್ ಹಲವು ಸಲಕರಣೆಗಳನ್ನು ಹಂಚಿಕೆ ಮಾಡಲಾಗಿದೆ. ಇದಕ್ಕಾಗಿ ಇಲಾಖೆ 22 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. 8435 ಫಲಾನುಭವಿಗಳನ್ನು ಗುರುತಿಸಿ, 8681 ಸಲಕರಣೆಗಳನ್ನು ನೀಡಲಾಗಿದೆ. ವಿಶೇಷವಾಗಿ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

Articles You Might Like

Share This Article