ಬೆಂಗಳೂರು,ಜ.5-ಕೆಲಸಕ್ಕಿದ್ದ ಜ್ಯುವೆಲರಿ ಅಂಗಡಿ ಮಾಲೀಕರ ಮನೆಯ ಕಿಟಕಿ ಗ್ರಿಲ್ ಮುರಿದು ಒಳ ನುಗ್ಗಿ ಸುಮಾರು 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ನೇಪಾಳಿ ದಂಪತಿ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಾಲಹಳ್ಳಿಯ ಶಾರದಮ್ಮ ನಗರದಲ್ಲಿ ಜ್ಯುವೆಲರಿ ಮಾಲೀಕರಾದ ನರೇಶ್ ಕುಟುಂಬ ವಾಸವಾಗಿದ್ದು, ಸಂಜಯ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರು ಜ್ಯುವೆಲರಿ ಅಂಗಡಿ ಇಟ್ಟುಕೊಂಡಿದ್ದಾರೆ.
ಇವರ ಮನೆಯಲ್ಲಿ ಕಳೆದ ಆರು ವರ್ಷಗಳಿಂದ ನೇಪಾಳ ಮೂಲದ ದಂಪತಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಒಂದು ಮಗುವಿದೆ. ನೇಪಾಳಿ ದಂಪತಿ ಪೈಕಿ ಮಹಿಳೆ ಮನೆ ಕೆಲಸ ಮಾಡಿಕೊಂಡಿದ್ದರೆ, ಈಕೆಯ ಗಂಡ ಸೆಕ್ಯುರಿಟಿಗಾರ್ಡ್ ಆಗಿದ್ದನು.
ದೆಹಲಿಯಲ್ಲಿ ಮತ್ತೊಂದು ಭೀಕರ ಅಪಘಾತ ಬೆಳಕಿಗೆ
ನರೇಶ್ ಕುಟುಂಬ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಡಿ.28ರಿಂದ ಜ.1ರವರೆಗೆ ಮಡಿಕೇರಿಗೆ ಪ್ರವಾಸಕ್ಕೆ ತೆರಳಿತ್ತು. ಇದೇ ಸಮಯವನ್ನು ಕಾದಿದ್ದ ದಂಪತಿ ಡಿ.28-29ರ ಮಧ್ಯೆ ಮಾಲೀಕರ ಮನೆಯ ಕಿಟಕಿ ಗ್ರಿಲ್ ಮುರಿದು ಒಳ ನುಗ್ಗಿ ಸುಮಾರು 35 ಲಕ್ಷ ರೂ. ಮೌಲ್ಯದ 800 ಗ್ರಾಂ ಚಿನ್ನಾಭರಣಗಳನ್ನು ದೋಚಿಕೊಂಡು ತಮ್ಮ ಮಗುವಿನೊಂದಿಗೆ ಪರಾರಿಯಾಗಿದ್ದಾರೆ.
ನರೇಶ್ ಕುಟುಂಬ ಜ.1ರಂದು ಬೆಳಗಿನ ಜಾವ ಮನೆಗೆ ವಾಪಾಸಾದಾಗ ಕೆಲಸಕ್ಕಿದ್ದ ನೇಪಾಳಿ ದಂಪತಿ ನಾಪತ್ತೆಯಾಗಿದ್ದರು. ಮನೆ ಬೀಗ ತೆಗೆದು ಒಳಗೆ ಹೋದಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ. ತಕ್ಷಣ ನರೇಶ್ ಅವರು ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾದ ಕಬ್ಬಿಣದ ದ್ರವ ಬಿದ್ದು 8 ಮಂದಿ ಕಾರ್ಮಿಕರಿಗೆ ಗಾಯ
ಎರಡು ತಂಡ ರಚನೆ:
ಜ್ಯುವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿರುವ ನೇಪಾಳಿ ಮೂಲದ ದಂಪತಿ ಪತ್ತೆಗಾಗಿ ಉತ್ತರ ವಿಭಾಗದ ಡಿಸಿಪಿ ಪಾಟೀಲ್ ವಿನಾಯಕ ವಸಂತರಾವ್ ಅವರ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದ್ದು, ಈ ತಂಡ ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ.