ಬೆಂಗಳೂರು,ಮಾ.8-ರಾಜ್ಯದಲ್ಲಿ ಹೊಸ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಗೆ ಇಂದು ತಿಳಿಸಿದರು. ಶಾಸಕ ಬಿ.ಕೆ.ಸಂಗಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಠಾಣೆಗಳನ್ನು ಸಹ ಆಧುನೀಕರಣಗೊಳಿಸುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ಒಟ್ಟು 6 ಪೊಲೀಸ್ ಠಾಣೆಗಳಲ್ಲಿವೆ. ಇದರಲ್ಲಿ 1 ಗ್ರಾಮಾಂತರ ಮತ್ತು 1 ಸಂಚಾರಿ ಪೊಲೀಸ್ ಠಾಣೆ ಮತ್ತು ಪೇಪರ್‍ಟೌನ್ ಠಾಣೆಗಳು ಶಿಥಿಲಾವಸ್ಥೆಯಲ್ಲಿವೆ. ಹೊಸದಾಗಿ ಠಾಣೆ ನಿರ್ಮಿಸಲು ಜಾಗದ ಸಮಸ್ಯೆಯಿದೆ. ಒಂದು ವೇಳೆ ಶಾಸಕರು ನಿವೇಶನವನ್ನು ನೀಡಿದರೆ ತಕ್ಷಣವೇ ನಾವು ಹೊಸ ಕಟ್ಟಡವನ್ನು ನಿರ್ಮಿಸಿಕೊಡುತ್ತೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಗಮೇಶ್, ಎಂಟಿಎಂನಲ್ಲಿ ನಿವೇಶನ ಕೊಡಲು ನಮ್ಮಿಂದ ಆಗುವುದಿಲ್ಲ. ನೀವು ಮನಸ್ಸು ಮಾಡಿದರೆ ಆಗುತ್ತದೆ ಎಂದರು. ನಾನು ಕೂಡ ಎಂಟಿಎಂನ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತನಾಡಿ, ಪೊಲೀಸ್ ಠಾಣೆ ನಿರ್ಮಿಸಲು ನಿವೇಶನ ನೀಡುವಂತೆ ಮನವಿ ಮಾಡುತ್ತೇನೆ. ನೀವು ಕೂಡ ಮನವರಿಕೆ ಮಾಡಿ ಎಂದು ಸಲಹೆ ಮಾಡಿದರು.
ಎಂಟಿಎಂ ಜಾಗವು ಈಗ ಯಾರ್ಯಾರೋ ಪಾಲಾಗುತ್ತದೆ. ಅಲ್ಲಿ ಮಸೀದಿಗಳು, ಚರ್ಚ್‍ಗಳು, ದೇವಾಲಯಗಳು ತಲೆಯೆತ್ತಿವೆ. ಠಾಣೆ ನಿರ್ಮಿಸಲು ಜಾಗ ಕೊಡಿಸಿದರೆ ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಜ್ಞಾನೇಂದ್ರ ಹೇಳಿದರು.
